ಪಿರಿಯಾಪಟ್ಟಣ : ಕೋವಿಡ್-19 ಭಯದಿಂದ ದೂರವಾಗಿ ಮಕ್ಕಳನ್ನು ಕಡ್ಡಾಯವಾಗಿ ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ಪೋಷಕರು ಕಳುಹಿಸಬೇಕು ಎಂದು ಶಾಸಕ ಕೆ.ಮಹದೇವ್ ಮನವಿ ಮಾಡಿದರು.
ತಾಲೂಕಿನ ಸೀಗೂರು ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿ ಮಾತನಾಡಿದರು. ಎಲ್ಲರೂ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸುವ ಪರಿಪಾಠ ಬೆಳೆಯಬೇಕು ಕೊರೊನಾ ಬಗ್ಗೆ ಮಕ್ಕಳಲ್ಲಿ ಭಯ ಇಲ್ಲದಂತೆ ಮಾಡಿ ಕಲಿಕಾ ಪೂರ್ವಕ ವಾತಾವರಣವನ್ನು ಸೃಷ್ಟಿಮಾಡಬೇಕು ಎಂದು ತಿಳಿಸಿದರು.
ಸಿಡಿಪಿಒ ಕುಮಾರ್ ಮಾತನಾಡಿ 20 ತಿಂಗಳ ನಂತರ ಅಂಗನವಾಡಿ ಕೇಂದ್ರಗಳನ್ನು ಪುನರಾರಂಭ ಮಾಡಿದ್ದು ಕೇಂದ್ರಗಳನ್ನು ಸ್ಯಾನಿಟೈಜರ್ ಮಾಡಿ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ. ಅಲ್ಲದೆ ಪೋಷಕರ ಒಪ್ಪಿಗೆ ಪಡೆದ ನಂತರವೆ ಮಕ್ಕಳನ್ನು ಕೇಂದ್ರಗಳಿಗೆ ದಾಖಲಿಸಲಾಗುತ್ತಿದ್ದು. ಪ್ರತಿಯೊಬ್ಬ ಪೋಷಕರು ಕಡ್ಡಾಯವಾಗಿ ಎರಡು ಲಸಿಕೆಯನ್ನು ಪಡೆದ ನಂತರವೇ ಮಕ್ಕಳನ್ನು ಅಂಗನವಾಡಿಗೆ ದಾಖಲಿಸಲಾಗುವುದು ಎಂದರು.
ಅಂಗನವಾಡಿ ಕೇಂದ್ರವನ್ನು ಸಂಪೂರ್ಣ ತಳಿರು ತೋರಣಗಳಿಂದ ಶೃಂಗಾರ ಮಾಡಿ ಮಕ್ಕಳಿಗೆ ಗುಲಾಬಿ ಹೂ ಮತ್ತು ಸಿಹಿ ತಿಂಡಿ ನೀಡಿ ಸ್ವಾಗತಿಸಲಾಯಿತು.