ಪಿರಿಯಾಪಟ್ಟಣ: ಕೊರೊನಾ ಸಂಕಷ್ಟದ ಸಮಯದಲ್ಲಿ ಜನತೆ ಆರ್ಥಿಕ ಸಮಸ್ಯೆಗೆ ಸಿಲುಕಿ ನರಳುತ್ತಿರುವಾಗ ಬಿಜೆಪಿ ಸರ್ಕಾರ ಜನತೆಯ ರಕ್ತ ಹೀರುವುದರೊಂದಿಗೆ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್ ಹಾಗೂ ಇನ್ನಿತರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್ ಆರೋಪಿಸಿದರು.
ಪಟ್ಟಣದ ಭಾಗ್ಯಲಕ್ಷ್ಮಿ ಪೆಟ್ರೋಲ್ ಬಂಕ್ ಮುಂಭಾಗ ಶುಕ್ರವಾರ ಪಿರಿಯಾಪಟ್ಟಣ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಏರಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದರು.
ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಜನಸಾಮಾನ್ಯರ ಮೇಲೆ ಕಾಳಜಿಯಿದ್ದರೆ ಇಂಧನ ಮೇಲೆ ಸುಂಕ ದರವನ್ನು ಕಡಿಮೆ ಮಾಡುತ್ತಿದ್ದರು. ಆದರೆ ಇವರಿಗೆ ಜನಸಾಮಾನ್ಯರ ಮೇಲೆ ಕಾಳಜಿ ಇಲ್ಲ. ಅದಕ್ಕಾಗಿ ಪೆಟ್ರೋಲ್, ಡೀಸೆಲ್ ಬೆಲೆ ಜೊತೆಗೆ ದಿನನಿತ್ಯ ಬಳಸುವ ಅಗತ್ಯ ಏರಿಕೆ ಮಾಡುವ ಮೂಲಕ ಬಡವನ್ನು ಹಿಂಸಿಸುವ ಮೂಲಕ ದೇಶದಲ್ಲಿ ನರಕ ಸೃಷ್ಟಿಸುತ್ತಿದ್ದಾರೆ.
ಅಲ್ಲದೆ ಜನರಿಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಹೇಳಿ ನರೇಂದ್ರ ಮೋದಿ ಅಧಿಕಾರ ಮಾಡುತ್ತ ಈ ದೇಶದ ಜನರ ರಕ್ತ ಹೀರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಂದು ಮನಮೋಹನ್ ಸರ್ಕಾರದದಲ್ಲಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಅವರು ಹಾಹಾಕಾರ ಸೃಷ್ಟಿ ಮಾಡಿದ್ದರು. ಮೋದಿ ಅವರು ಕೂಡ ಪ್ರತಿಭಟನೆ ಮಾಡಿದ್ದರು. ಜನರಿಗೆ ಸುಳ್ಳು ಭರವಸೆ ನೀಡಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರು.
ಅಚ್ಛೇ ದಿನ್ ಆಯೇಂಗೆ ಎಂದು ಹೇಳಿದ್ದರು. ಇವತ್ತು ನರಕದ ದಿನಗಳು ಬಂದಿವೆ. ನಾವು ನರಕ ನೋಡಿರಲಿಲ್ಲ. ಆದರೆ, ಇದೀಗ ನರಕದ ದಿನಗಳನ್ನು ನೋಡುತ್ತಿದ್ದೇವೆ. ಈಗ ಕೋವಿಡ್ ಸಂಕಷ್ವವಿದೆ. ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿದರೆ ಜನ ಸಾಮಾನ್ಯರು ಜೀವನ ನಡೆಸುವುದು ಹೇಗೆ ಇದರ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ರಕ್ತ ಬಸಿಯು ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದರು.
25 ನಾಲಾಯಕ್ ಸಂಸದರು
ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಪ್ರತಿನಿತ್ಯ ಆರೋಪ ಮಾಡುತ್ತಿದ್ದ ಬಿಜೆಪಿಗರು. ಇಂದು 25 ಸಂಸದರು, ಕೇಂದ್ರ ಹಾಗೂ ರಾಜ್ಯದಲ್ಲಿ ಈಗ ನಡೆಯುತ್ತಿರುವ ಆವಾಂತರಗಳನ್ನು ಪ್ರಶ್ನೆ ಮಾಡುವ ಯೋಗ್ಯತೆ ಕಳೆದುಕೊಂಡಿದ್ದಾರಾ? ಇವರು ಕೇವಲ ಮೋದಿಯ ಹೊಗಳು ಭಟ್ಟರು ಅಷ್ಟೇ. ಇವರಿಗೆ ಸತ್ಯ ಹೇಳುವ ಧೈರ್ಯವಿಲ್ಲ ನಾಲಾಯಕ್ ಗಳು ಎಂದರು.
ಪಿರಿಯಾಪಟ್ಟಣ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಟಿ.ಸ್ವಾಮಿ ಮಾತನಾಡಿ, ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೆ ಪೆಟ್ರೋಲ್ ಬೆಲೆ ಏರಿಕೆಯಾಗಿರುವುದಲ್ಲದೆ ಅಗತ್ಯ ವಸ್ತುಗಳ ಬೆಲೆ, ಡಿಸೆಲ್ ಬೆಲೆ ಏರಿಕೆಯಾಗಿದೆ. ಈ ಹೊರತು ಜನಸಾಮಾನ್ಯರ ಆದಾಯ ಏರಿಕೆಯಾಗಿಲ್ಲ.
ಕೊರೊನಾದಿಂದ ಜನಸಾಮಾನ್ಯರ ಜೀವನ ಮಟ್ಟ ಕುಂದಿಹೋಗಿ ಆದಾಯ ಮತ್ತಷ್ಟು ಕಡಿಮೆಯಾಗಿದೆ. ಬಡವರ ಕನಿಷ್ಠ ವೇತನವನ್ನು ಸಹ ಸರ್ಕಾರ ಏರಿಕೆ ಮಾಡಿಲ್ಲ. ಹೀಗಿರುವಾಗ ಸರ್ಕಾರ ದಿನನಿತ್ಯ ಬಳಸುವ ವಸ್ತುಗಳನ್ನು ಏರಿಕೆ ಮಾಡುವುದು ಎಷ್ಟು ಸರಿ, ಇದು ಬಿಜೆಪಿ ಸರ್ಕಾರದ ಹಗಲು ದರೋಡೆ ಎಂದು ಆರೋಪಿಸಿದರು.
ಮೈಸೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷೆ ಎಂ.ಲತಾ ಸಿದ್ದಶೆಟ್ಟಿ, ಮಾಜಿ ಮೇಯರ್ ಪುಷ್ಪವಲ್ಲಿ, ಪಿರಿಯಾಪಟ್ಟಣ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮುತ್ತುರಾಣಿ, ತಾ.ಪಂ. ಮಾಜಿ ಅಧ್ಯಕ್ಷೆ ಸರಸ್ವತಿ, ಮುಖಂಡರಾದ ಬಿ.ಎಸ್.ರಾಮಚಂದ್ರ, ಪಿ.ಮಹದೇವ್, ಜೆ.ಮೋಹನ್, ಸೋಮಶೇಖರ್, ವಿ.ಜಿ.ಕೊಪ್ಪಲು ರಾಮಚಂದ್ರ ಹಬಟೂರು ರಘು, ಮಹಿಳಾ ಮುಖಂಡರಾದ ರತ್ನಮ್ಮ ಮಹದೇವ್, ಮಂಜುಳ ಮಹದೇವ್ ಗಿರಿಜಾ ಈರಾಜ್, ರಾಣಿ ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.