ಪಿರಿಯಾಪಟ್ಟಣ: ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ಮಗಳಿಗೆ ಎಷ್ಟೇ ಬುದ್ಧಿ ಹೇಳೀದರೂ ಕೇಳದ ಹಿನ್ನೆಲೆಯಲ್ಲಿ ತಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದ ಮಹದೇಶ್ವರ ದೇವಸ್ಥಾನದ ರಸ್ತೆಯಲ್ಲಿ ನಡೆದಿದೆ.
ಪಟ್ಟಣದ ಗೊಲ್ಲರಬೀದಿಯ ನಿವಾಸಿ ಗಾಯತ್ರಿ (21) ಹತ್ಯೆಯಾದ ಯುವತಿ. ಈಕೆಯ ತಂದೆ ಜಯರಾಮ್ ಕೊಲೆ ಮಾಡಿದ ಆರೋಪಿಯಾಗಿದ್ದು, ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಜಯರಾಮ್ಗೆ ಮೂವರು ಹೆಣ್ಣು ಮಕ್ಕಳಿದ್ದು, ಮೊದಲನೆ ಮಗಳನ್ನು ಈಗಾಗಲೇ ಮದುವೆ ಮಾಡಿದ್ದಾರೆ. ಎರಡೆನೇ ಮಗಳು ಮೈಸೂರಿನ ಕಾಲೇಜು ಒಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮೂರನೆಯವಳಾದ ಗಾಯತ್ರಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ತಾಯಿ ಅನಾರೋಗ್ಯಕ್ಕೆ ಬಿದ್ದ ನಂತರ ತನ್ನ ವಿದ್ಯಾಭ್ಯಾಸವನ್ನು ಅರ್ಧದಲ್ಲೀಯೇ ನಿಲ್ಲಿಸಿ ಮನೆಯಲ್ಲಿಯೇ ತಂದೆತಾಯಿಗಳೊಂದಿಗೆ ವಾಸವಾಗಿದ್ದಳು.
ಈ ನಡುವೆ ಗಾಯತ್ರಿ ಒಂದೂವರೆ ವರ್ಷದಿಂದ ಅನ್ಯ ಕೋಮಿನ ಯುವಕನ ಪ್ರೀತಿಯಲ್ಲಿ ಬಿದ್ದಿದ್ದಳು. ಈ ವಿಚಾರವಾಗಿ ತಂದೆ ಮಗಳಿಗೆ ಅನೇಕ ಬಾರಿ ಮನವೊಲಿಸಿ ಬುದ್ಧಿ ಮಾತು ಕೇಳದೆ ಹಠ ಹಿಡಿದಿದ್ದಳು. ಮನೆಯವರು ಮಾನ ಹೋಗುತ್ತದೆ ಬೇಡ ಎಂದರೂ ಆತನನ್ನು ಮದುವೆಯಾಗುತ್ತೇನೆ ಎನ್ನುತ್ತಿದ್ದ ಮಗಳ ಹಠಮಾರಿ ಧೋರಣೆಯಿಂದ ಕುಪಿತಗೊಂಡ ತಂದೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಊಟ ಕೊಡಲು ಬಂದ ಮಗಳನ್ನು ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿ ತಾನೇ ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.
ವಿಷಯ ತಿಳಿದ ಬಳಿಕ ಘಟನಾ ಸ್ಥಳಕ್ಕೆ ಡಿವೈಎಸ್ಪಿ ರವಿಪ್ರಸಾದ್, ವೃತ್ತ ನಿರೀಕ್ಷಕರಾದ ಜಗದೀಶ್, ಬಿ.ಆರ್.ಪ್ರದೀಪ್, ಪಿಎಸ್ಐಗಳಾದ ಸದಾಶಿವ ತಿಪ್ಪಾರೆಡ್ಡಿ, ಪುಟ್ಟರಾಜ ಮತ್ತು ಸಿಬ್ಬಂದಿ ವೀರೇಂದ್ರ ಕುಮಾರ್, ನಾರಾಯಣ ಶೆಟ್ಟಿ ಬೆರಳು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.