ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಕಿರುಗುಂದ ಗ್ರಾಮದ ದಲಿತ ಯುವಕನಿಗೆ ಅಮಾನುಷವಾಗಿ ಹಲ್ಲೆ ಮಾಡಿದ್ದಲ್ಲದೆ, ಜಾತಿ ನಿಂದನೆ ಮಾಡಿ ಮೂತ್ರ ಕುಡಿಸಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ.ಅರ್ಜುನ್ ಹೊರಕೇರಿ ಅವರನ್ನು ಸೇವೆಯಿಂದಲೇ ವಜಾಗೊಳಿಸಿ, ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಆಗ್ರಹಿಸಿದ್ದಾರೆ.
ಸಂವಿಧಾನದ ‘ಕಾನೂನನ್ನು ನಾವು ಗೌರವಿಸುತ್ತೇವೆ’ ಎನ್ನುವ ಆರಕ್ಷಕರೆ ಈ ರೀತಿ ಮಾಡಿದರೆ ನ್ಯಾಯ ಸಿಗುವುದಾದರೂ ಎಲ್ಲಿ? ಇದು ನಿಜಕ್ಕೂ ಆತಂಕಕಾರಿ ವಿಷಾದದ ಸಂಗತಿಯಾಗಿದೆ. ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಮೇಲೆ ನಡೆದಿರುವ ಅಮಾನವೀಯ ಘಟನೆಯನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ಠಾಣೆಯಿಂದ ಮನೆಗೆ ತೆರಳಿದ್ದ ಯುವಕನಿಗೆ ಕರೆಮಾಡಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನೇ ಮುಗಿಸುವುದಾಗಿ ಕೊಲೆ ಬೆದರಿಕೆ ಹಾಕಿರುವ ಪರಿ ನೋಡಿದರೆ ಇವನೆಲ್ಲೊ ಗೂಂಡಾ ಪಡೆಯಿಂದ ಬಂದಿರುವ, ಜಾತಿ ಕ್ರೌರ್ಯದ ಮನಸ್ಸುಳ್ಳ ವ್ಯಕ್ತಿಯಾಗಿದ್ದಾನೆ ಎಂದು ಆರೋಸಿದ್ದಾರೆ.
ಈ ಕೃತ್ಯ ಎಸಗಿರುವ ಪಿಎಸ್‌ಐಗೆ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು. ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿ ಈತನ ಮೇಲಿನ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗಿ ದಸಂಸ ಒತ್ತಾಯಿಸುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಶಿವಕುಮಾರ್ ತಿಳಿಸಿದ್ದಾರೆ.