ಸೋಮವಾರಪೇಟೆ: ಸೋಲಾರ್ ತಂತಿಗೆ ಸಿಲುಕಿ ಕಾಡಾನೆ ಮರಿ ಮೃತಪಟ್ಟ ಘಟನೆ ತಾಲೂಕಿನ ಅರೆಯೂರು ಗ್ರಾಮದ ಮೋರಿಕಲ್ಲು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಗ್ರಾಮದ ಪೂವಯ್ಯ ಎಂಬುವರ ತೋಟದಲ್ಲಿ ಶನಿವಾರ ಕಾಡಾನೆ ಕಳೇಬರ ಪತ್ತೆಯಾಗಿದೆ. ನೇಗಳ್ಳೆ ಅವಿನಾಶ್ ಎಂಬುವರು ಪೂವಯ್ಯ ಅವರ ಜಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಶುಂಠಿ ಕೃಷಿ ಮಾಡಿದ್ದರು. ಕಾಡಾನೆಗಳ ಹಾವಳಿಯನ್ನು ತಪ್ಪಿಸಲು ಸ್ವಂತವಾಗಿ ಸೋಲಾರ್ ತಂತಿಬೇಲಿ ನಿರ್ಮಿಸಿದ್ದರು.
ಯಡವನಾಡು ಮೀಸಲು ಅರಣ್ಯದಿಂದ ಬಂದಿರಬಹುದು ಎನ್ನಲಾದ ಕಾಡಾನೆ ಹಿಂಡು ತಂತಿಯನ್ನು ದಾಟುವ ಸಂದರ್ಭ 8 ವರ್ಷದ ಆನೆ ಮರಿಯ ಸೊಂಡಿಲಿಗೆ ತಂತಿ ಸ್ಪರ್ಶಗೊಂಡು ಮೃತಪಟ್ಟಿದೆ ಎನ್ನಲಾಗಿದೆ.
ಸ್ಥಳಕ್ಕೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶಮಾ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಬದಾಮಿ ಕಳೇಬರ ಪರೀಕ್ಷೆ ನಡೆಸಿದರು.