ಪಿರಿಯಾಪಟ್ಟಣ: ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಇವರೆಲ್ಲಾ ಸೀದಾ ಬಂದ್ರಾ, ಇವತ್ತು ಯಾವನಾದ್ರೂ ಮಂತ್ರಿ, ನಿಗಮ ಮಂಡಳಿ ಮೆಂಬರ್ಸ್, ಅಧ್ಯಕ್ಷ ನಾಗಿದ್ರೂ ಅದು ನಮ್ಮ ತ್ಯಾಗದಿಂದ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕುಟುಕಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಭೇಟಿನೀಡಿ ಮೈಸೂರಿನ ಹರ್ಬಲ್ ನ್ಯೂಟ್ರಿಷನ್ ಕ್ಲಬ್ ವತಿಯಿಂದ ಕೊಡುಗೆಯಾಗಿ ನೀಡಿದ್ದ ರೂ.8 ಲಕ್ಷ ಮೊತ್ತದ ಆಕ್ಸಿಜನ್ ಕಂಟ್ರೇಲರುಗಳನ್ನು ಹಸ್ತಾಂತರಿಸಿ ಮಾತನಾಡಿದರು.
ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರಲ್ಲ ಯಾರ‍್ರಿ ಅವ್ರು, ವಿಧಾನಪರಿಷತ್ ಸದಸ್ಯತ್ವ ಸ್ಥಾನ ಅವರಪ್ಪನ ಮನೆದಾ? ನಮ್ಮ 17 ಜನ ಶಾಸಕರ ತ್ಯಾಗದಿಂದ ಇವ್ರೆಲ್ಲಾ ಅಧಿಕಾರಕ್ಕೆ ಬಂದವರು ಇವರೆಲ್ಲಾ ನಮ್ಮ ತ್ಯಾಗ ಇಲ್ಲದೆ ಸುಮ್ಸುಮ್ನೆ ಅಧಿಕಾರಕ್ಕೆ ಬಂದ್ಬಿಟ್ರಾ? ಅವರಿಗೇನು ಅಧಿಕಾರ ಇದೆ ಎಂದು ನಮ್ಮ ವಿರುದ್ಧ ಮಾತನಾಡುತ್ತಾರೆ.
ವಿಧಾನಪರಿಷತ್ ಸದಸ್ಯತ್ವ ಸ್ಥಾನ ನಮ್ಮ ತ್ಯಾಗದಿಂದ ಬಂದಿದ್ದು, ಸರ್ಕಾರ, ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳು, ನಿಗಮ ಮಂಡಳಿಗಳ ಮೆಂಬರ್ಸ್ ಹಾಗೂ ಅಧ್ಯಕ್ಷರೆಲ್ಲ ನಮ್ಮ ಮರ್ಜಿಯಲ್ಲಿದ್ದಾರೆ. ಅವರ ಮರ್ಜಿಯಲ್ಲಿ ನಾನಿಲ್ಲ ಎಂದು ಹೆಸರೇಳದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಬಿಡಿಎ ಅಧ್ಯಕ್ಷ ವಿಶ್ವನಾಥ್ ಮತ್ತು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ವಿರುದ್ಧ ಹರಿಹಾಯ್ದರು.
ಮಕ್ಕಳು ದೇಶದ ಸಂಪತ್ತು
ಕೊರೊನಾ ಎರಡನೇ ಅಲೆ ಇನ್ನೂ ಮಾಸಿಲ್ಲಾ ಆಗಲೇ ಮೂರನೇ ಅಲೆ ಆರಂಭವಾಗುವ ಬಗ್ಗೆ ತಜ್ಞರು ಹೇಳುತ್ತಿದ್ದು, ಮೂರನೇ ಅಲೆ ಮಕ್ಕಳ ಮೇಲೆ ತೀವ್ರವಾದ ಪರಿಣಾಮ ಬೀರುವುದಾಗಿ ಮಾಹಿತಿ ನೀಡಿದ್ದಾರೆ. ಮಕ್ಕಳು ದೇಶದ ಸಂಪತ್ತು ಆದ್ದರಿಂದ ಎಲ್ಲಾ ಪೋಷಕರು ಮಕ್ಕಳ ಮೇಲೆ ಹೆಚ್ಚು ನಿಗವಹಿಸಬೇಕು. ಪಿರಿಯಾಪಟ್ಟಣ, ಹುಣಸೂರು ಸೇರಿದಂತೆ ತಾಲೂಕು ಮಟ್ಟದಲ್ಲಿ ಮಕ್ಕಳ ಆಸ್ಪತ್ರೆಗಳಿಲ್ಲ ಕೂಡಲೇ ತಾಲೂಕು ಮಟ್ಟದಲ್ಲಿ ಮಕ್ಕಳ ಆಸ್ಪತ್ರೆ ತೆರೆಯುವ ಬಗ್ಗೆ ಮುತುವರ್ಜಿ ವಹಿಸಿ ಎಂದು ಶಾಸಕ ಕೆ.ಮಹದೇವ್‌ಗೆ ಸೂಚಿಸಿದರು.
ಶಾಸಕ ಕೆ.ಮಹದೇವ್ ಮಾತನಾಡಿ, ಕೊರೊನಾ ನಿಯಂತ್ರಣಕ್ಕಾಗಿ ನಮ್ಮೆಲ್ಲ ಕೊರೊನಾ ವಾರಿಯರ್ಸ್‌ಗಳು ದಿನದ 24ಗಂಟೆಗಳು ದುಡಿಯುತ್ತಿದ್ದಾರೆ. ಸಾರ್ವಜನಿಕರ ಉಪಯೋಗಕ್ಕಾಗಿ ದಾನಿಗಳು ಆಸ್ಪತ್ರಗೆ ಕೊಡುಗೆಯಾಗಿ ನೀಡಿರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನರ ಆರೋಗ್ಯವನ್ನು ಕಾಪಾಡಲು ಮುಂದಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೀತ್ ವಿ.ದೇವರಹಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ಉದ್ಯಮಿ ಸುರೇಶ್, ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನವೀನ್ ನೇರಳೆಕುಪ್ಪೆ, ಪಿ.ಪಿ.ಮಹದೇವ್, ಮುತ್ತೂರು ಮಹೇಶ್, ಬೆಮ್ಮತ್ತಿ ರೇಣು, ನೇರಳೆಕುಪ್ಪೆ ರಮೇಶ್, ಗುರುರಾಜ್, ಉತ್ತೇನಹಳ್ಳಿ ನವೀನ್, ಪಂಚವಳ್ಳಿ ಸತೀಶ್, ಗಂಗಣ್ಣ, ನೇರಳೆಕುಪ್ಪೆ ಶಿವು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಅಣ್ಣೇಗೌಡ, ಶೇಷಗಿರಿ ಇದ್ದರು.