ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಹೆರಾಯಿನ್, ಅಫೀಮುಗಳನ್ನು ಮಾರಾಟ ಮಾಡುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಮಾದಕವಸ್ತುಗಳ ದಂಧೆಕೋರರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಾಗಿದ್ದು, ಪೊಲೀಸರು ಫುಲ್ ಅಲರ್ಟ್ ಆಗಿರುವ ಹಿನ್ನೆಲೆ ಪಕ್ಕದ ಮಂಡ್ಯ ಜಿಲ್ಲೆಯತ್ತ ಮಾದಕವಸ್ತುಗಳ ದಂಧೆಕೋರರು ಮುಖ ಮಾಡಿದ್ದಾರೆ.
ಇಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಹೆರಾಯಿನ್, ಅಫೀಮುಗಳನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಮಂಡ್ಯದ ಯುವ ಪೀಳಿಗೆ ಮಾದಕವಸ್ತುಗಳ ವ್ಯಸನಿಗಳಾಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಎಸ್ಪಿ ಕಚೇರಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಪದೇಪದೆ ದೂರುಗಳು ಬರುತ್ತಿದ್ದವು.
ಈ ಹಿನ್ನೆಲೆ ಮಂಡ್ಯ ಪೊಲೀಸರು ಹೆರಾಯಿನ್, ಅಫೀಮು ಮಾರಾಟ ಮಾಡುವವರನ್ನು ಬಂಧಿಸಲು ಬಲೆ ಬೀಸಿದ್ದರು. ಇತ್ತೀಚೆಗೆ ಮಂಡ್ಯದ ಚರ್ಚ್ ರಸ್ತೆ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು.
ಅದನ್ನು ಗಮನಿಸಿದ ಪೊಲೀಸರು ಆ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಈ ಇಬ್ಬರು ಹೆರಾಯಿನ್ ಹಾಗೂ ಅಫೀಮು ಪೆಡ್ಲರ್ಗಳು ಎಂದು ತಿಳಿದಿದೆ.
ಇನ್ನೂ ತೀವ್ರತರವಾದ ವಿಚಾರಣೆ ಮಾಡಿದಾಗ, ನಾವು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಹೆರಾಯಿನ್ ಹಾಗೂ ಅಫೀಮು ಅನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಬಾಯಿ ಬಿಟ್ಟಿದ್ದಾರೆ. ಈ ಬಂಧಿತರಿಂದ 6 ಲಕ್ಷ ಮೌಲ್ಯದ ಹೆರಾಯಿನ್, 75 ಸಾವಿರ ಮೌಲ್ಯದ ಅಫೀಮುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಈ ಮಾದಕವಸ್ತುಗಳ ಮಾರಾಟಗಾರರು ಇನ್ನೂ ಇರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅವರ ಸೆರೆಗೂ ಬಲೆ ಬೀಸಿದ್ದಾರೆ. ಓಟ್ಟಾರೆ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಮಾರಾಟ ಕದ್ದು ಮುಚ್ಚಿ ಭಾರಿ ಜೋರಾಗೆ ನಡೆಯುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.