- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಿಐಡಿ ಮಹಿಳಾ ಡಿವೈಎಸ್‌ಪಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿಯಲ್ಲಿ ಇಂದು ನಡೆದಿದ್ದು, ಆತ್ಮಹತ್ಯೆ ಸುತ್ತ ಅನುಮಾನ ಹುತ್ತ ಬೆಳೆಯುತ್ತಿದೆ.
ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನ ಲಕ್ಷ್ಮೀ (33) ಆತ್ಮಹತ್ಯೆ ಮಾಡಿಕೊಂಡವರು. ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಲಕ್ಷ್ಮೀ ಸ್ನೇಹಿತ ಬಿಬಿಎಂಪಿ ಗುತ್ತಿಗೆದಾರ ಮನೋಹರ್ ಮನೆಯ ಕಿಟಕಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ಒಂದು ಪಾರ್ಟಿ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಲಕ್ಷ್ಮೀ ಅವರು 2014ರ ಬ್ಯಾಚ್‌ನ ಅಧಿಕಾರಿಯಾಗಿದ್ದು, 2017ರಿಂದ ಕೆಲಸಕ್ಕೆ ಸೇರಿದ್ದರು. ಆದರೆ ದೀರ್ಘ ಕಾಲದವರೆಗೆ ರಜೆ ಹಾಕಿದ್ದರು. ಸರಿಯಾದ ಸ್ಥಳಕ್ಕೆ ನನ್ನನ್ನು ನಿಯೋಜನೆ ಮಾಡಿಲ್ಲ ಎಂಬುವುದು ಸೇರಿ ಇನ್ನಿತರ ವಿಷಯದಿಂದ ಖಿನ್ನತೆ ಒಳಗಾಗಿ ಮಾನಸಿಕವಾಗಿ ನೋವು ಅನುಭವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇನ್ನು ಕಳೆದ 8 ವರ್ಷದ ಹಿಂದೆಯೇ ಸಾಫ್ಟ್‌ವೇರ್ ಇಂಜಿನಿಯರನ್ನು ಪ್ರೀತಿಸಿ ಮದುವೆಯಾಗಿದ್ದು, ಮಕ್ಕಳಾಗಿರಲಿಲ್ಲ ಆದರೂ ದಂಪತಿ ಅನೂನ್ಯವಾಗಿದ್ದರು. ಪ್ರಸ್ತುತ ಕೋಣನಕುಂಟೆಯಲ್ಲಿ ಕುಟುಂಬದ ಜತೆ ವಾಸವಾಗಿದ್ದ ಲಕ್ಷ್ಮೀ ಸ್ನೇಹಿತ ಮನೋಹರ್ ಮನೆಯಲ್ಲಿ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿರುವುದರಿಂದ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ನಿನ್ನೆ ರಾತ್ರಿ ಆರೇಳು ಮಂದಿ ಸ್ನೇಹಿತರು ಸೇರಿಕೊಂಡು ಮನೋಹರ್ ಮನೆಯಲ್ಲಿ ಪಾರ್ಟಿ ಮಾಡಿದ ಬಳಿಕ ಮನೆಯ ಒಂದುಕೊಠಡಿಗೆ ಹೋಗಿ ರಾತ್ರಿ ಸುಮಾರು 11.30ರ ವೇಳೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಮನೋಹರ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಲಕ್ಷ್ಮೀ ಅವರ ತಂದೆ ವೆಂಕಟೇಶ್ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು. ಸೂಕ್ತ ತನಿಖೆ ನಡೆಸುವ ಮೂಲಕ ಸತ್ಯ ಹೊರಬರುಂತೆ ಪೊಲೀಸರು ಮಾಡಬೇಕು ಎಂದು ಮನವಿ ಮಾಡಿದ್ದಾರೆ.