ಹುಬ್ಬಳ್ಳಿ: ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರು, ಉಪನ್ಯಾಸಕರು, ಅತಿಥಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿತ್ತು. ಈಗಿನ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಇಂದು ಆಯೋಜಿಸಿದ್ದ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಶಿಕ್ಷಕರ ಸಂಬಳ-ಸೌಲಭ್ಯಗಳ ವಿಚಾರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲಾ ಉದಾರವಾಗಿ ನಡೆದುಕೊಂಡಿದೆ. ಶಿಕ್ಷಕರ ಬಡ್ತಿ, ಅತಿಥಿ ಶಿಕ್ಷಕರ ಸಂಬಳ ಏರಿಕೆ ಮಾಡಿದ್ದೆವು. ಹೆರಿಗೆ ರಜೆಯನ್ನು ಮೂರರಿಂದ ಆರು ತಿಂಗಳಿಗೆ ಏರಿಕೆ ಮಾಡಿದ್ದೆವು, ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಸ್ಥಾಪನೆಯ ನಿರ್ಧಾರ ಮಾಡಿದ್ದೆವು ಎಂದು ಹೇಳಿದರು.
ನೋಟ್ ಬ್ಯಾನ್, ಜಿಎಸ್‌ಟಿ ಜಾರಿ ನಂತರ ಸಾಕಷ್ಟು ಕೈಗಾರಿಕೆಗಳು ಮುಚ್ಚಿ ನಿರುದ್ಯೋಗ ಸಮಸ್ಯೆ ಹೆಚ್ಚಾಯಿತು. ಲಾಕ್ ಡೌನ್ ನಂತರದ ಅವಧಿಯಲ್ಲಿ ಕೈಗಾರಿಕೆ, ಕೃಷಿ, ವ್ಯಾಪಾರ ವಾಹಿವಾಟು ಕುಂಠಿತವಾಗಿ ನಿರುದ್ಯೋಗ ಮಿತಿಮೀರಿ ಹೋಗಿದೆ. ಇದರಿಂದ ಆರೋಗ್ಯ ಮತ್ತು ಆರ್ಥಿಕ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಕೇಂದ್ರ ವಿರುದ್ಧ ಕಿಡಿಕಾರಿದರು.
ಕೊರೊನಾ ಬಂದ ನಂತರ ಭಾರತದ ಜಿಡಿಪಿ 24% ಕುಸಿತ ಕಂಡಿದೆ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರ ಬಂದಿಲ್ಲ. ಇದರಿಂದ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಜನರ ತೆರಿಗೆ ಹಣವನ್ನು ಜನಕಲ್ಯಾಣ ಕಾರ್ಯಗಳಿಗೆ ಬಳಸದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ದ್ರೋಹ ಬಗೆದಿವೆ ಆರೋಪಿಸಿದರು.
ಶಿಕ್ಷಕರು ಸೇರಿ ಸರ್ಕಾರಿ ನೌಕರರು ಕೊರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ಸೂಕ್ತ ಸುರಕ್ಷತಾ ಸೌಲಭ್ಯಗಳನ್ನು ನೀಡಬೇಕು, ಸೋಂಕು ತಗುಲಿದರೆ ಗುಣಮಟ್ಟದ ಚಿಕಿತ್ಸೆ ಕೊಡಿಸಬೇಕು, ಸಾವಿಗೀಡಾದರೆ ಸರಿಯಾದ ಪರಿಹಾರ ಕೊಡಬೇಕು. ಕೇವಲ ಚಪ್ಪಾಳೆ ಹೊಡೆಸಿ, ಹೂ ಸುರಿಸಿ ಪ್ರಚಾರ ಪಡೆಯುವುದಲ್ಲ ಎಂದು ಹೇಳಿದರು.
ಕಾಶಿ – ಮಥುರಾಗಳು ದೇಶದ ಸಮಸ್ಯೆ ಅಲ್ಲ, ಜನರಿಗೆ ಇದು ಬೇಕಾಗಿಲ್ಲ. ಕೊರೊನಾದ ಭೀಕರತೆಗೆ ಜನ ಬದುಕು ಸಾಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ಇರುವಾಗ ಅವರ ಬದುಕಿಗೆ ಬೆಂಬಲವಾಗಿ ನಿಲ್ಲಬೇಕಾಗಿದ್ದ ಸರ್ಕಾರ ತನ್ನ ವೈಫಲ್ಯ ಮುಚ್ಚಿಹಾಕಲು ಭಾವನಾತ್ಮಕ ವಿಚಾರಗಳನ್ನು ಕೆದಕಿ ರಾಜಕಾರಣ ಮಾಡುವುದು ಜನದ್ರೋಹದ ಕೆಲಸ ಎಂದರು.