ಉತ್ತರಪ್ರದೇಶ: ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ, ಹೆತ್ತವರನ್ನು ಗೋಳಾಡಿಸಿದ
ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಕಾವಿಧಾರಿಗಳ ಪಾಲಿನ ಕಳಂಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರ ಆಡಳಿತದಲ್ಲಿ ಉತ್ತರಪ್ರದೇಶದ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ. ಮೊದಲು ಇವರನ್ನು ವಜಾ ಮಾಡಿ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಹೊಣೆಯನ್ನು
ಯೋಗಿ ಆದಿತ್ಯ ನಾಥ್ ಮಾತ್ರವಲ್ಲ, ಅವರನ್ನು ಬೆಂಬಲಿಸುತ್ತಿರುವ
ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಸ್ತ ಸಂಘ ಪರಿವಾರ ಕೂಡಾ ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಅತ್ಯಾಚಾರಿಗಳ ಪರವಾಗಿ ನಿಂತಿರುವ ಪೊಲೀಸರು
ಉತ್ತರಪ್ರದೇಶದಲ್ಲಿ ಮನಿಷಾ ವಾಲ್ಮೀಕಿ ಎಂಬ ಯುವತಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಬರ್ಬರವಾಗಿ ಹತ್ಯೆಮಾಡಲಾಗಿದೆ. ಅಷ್ಟೇ ಅಲ್ಲದೇ ಅತ್ಯಾಚಾರಿಗಳ ಪರವಾಗಿ ನಿಂತಿರುವ ಪೊಲೀಸರು ಮೃತದೇಹವನ್ನು ಅಜ್ಞಾತ ಸ್ಥಳದಲ್ಲಿ ಸುಟ್ಟು ಹಾಕಿದ್ದಾರೆ.
ಮೃತಳ ಅಂತಿಮ ದರ್ಶನ ಪಡೆಯುವುದಕ್ಕೆ ಮನಿಷಾಳ ಪೋಷಕರಿಗೂ ಪ್ರವೇಶ ನೀಡಿಲ್ಲ. ಇಲ್ಲಿ ಏನನ್ನು ಸುಡಲಾಗುತ್ತಿದೆ ಎಂದು ಪತ್ರಕರ್ತರು ಕೇಳಿದರೆ, ನೀವು ಅದನ್ನು ಡಿಎಂ ಸಾಹೇಬರನ್ನು (ಜಿಲ್ಲಾಧಿಕಾರಿ) ಕೇಳಿ, ನಿಮ್ಮನ್ನು ಮುಂದೆ ಹೋಗದಂತೆ ತಡೆಯುವುದಷ್ಟೇ ನಮ್ಮ ಕೆಲಸ ಎಂದು ಪೊಲೀಸರು ಉಡಾಫೆಯಾಗಿ ನಡೆದುಕೊಂಡಿದ್ದಾರೆ.
ಇನ್ನು ಹೀಗೆ ಆತುರಾತುರವಾಗಿ ಬೆಳಗಿನ ಜಾವ ಮೂರು ಗಂಟೆಗೆ ದೇಹ ಸುಟ್ಟು ಹಾಕುವ ಅಗತ್ಯವಾದರೂ ಏನಿತ್ತು? ಬಡಪಾಯಿ ಮನಿಷಾಳ ಬೆನ್ನುಮೂಳೆ ಮುರಿದು, ನಾಲಿಗೆ ಕತ್ತರಿಸಿ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಯೋಗಿ ಸರ್ಕಾರ ಸತ್ತವಳ ಮೇಲೂ ಸೇಡು ತೀರಿಸಿಕೊಳ್ಳುತ್ತಿದೆ! ಮನಿಷಾ ಇಂದು ಮತ್ತೆ ಅತ್ಯಾಚಾರಕ್ಕೆ, ಕೊಲೆಗೆ ಈಡಾದಳು. ಇಷ್ಟಾದ ಮೇಲೂ ಪೊಲೀಸರು ಹೆಣ ಸುಡುತ್ತಿರುವ ಜಾಗಕ್ಕೆ ಜೀವದ ಹಂಗು ತೊರೆದು ಪತ್ರಕರ್ತರು ಹೋಗಿ ವರದಿ ಮಾಡಿದ್ದಾರೆ.