ಬೆಂಗಳೂರು: ಆಪರೇಷನ್ ಟೈಗರ್ ಮೂಲಕ ಸರಗಳ್ಳರ ಹುಟ್ಟಡಗಿಸಿದ್ದ ಮಾಜಿ ಪೊಲೀಸ್ ಆಯುಕ್ತ ಪಿ.ಜಿ. ಹರ್ಲಂಕರ್ (88) ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯ ಹಿನ್ನೆಲೆಯಲ್ಲಿ ನಗರದ ವಿಕ್ರಮ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ರಾತ್ರಿ ಕೊನೆಯುಸಿರೆಲೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹರ್ಲಂಕರ್ ಅವರು, ಬೆಂಗಳೂರು ನಗರ ಆಯುಕ್ತರಾಗಿ, ಸಿಆರ್ ಪಿಎಫ್ ನ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದರು. ತಾವು ಸತ್ತ ಮೇಲೆ ತಮ್ಮ ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಬೇಕೆಂಬ ಇಚ್ಚೆ ಹೊಂದಿದ್ದರು. ಅವರ ದೇಹವನ್ನು ದಾನ ನೀಡುವ ಪ್ರಕ್ರಿಯೆ ಸೋಮವಾರ ಕುಟುಂಬಸ್ಥರು ಹಾಗೂ ವೈದ್ಯಕೀಯ ಸಿಬ್ಬಂದಿ ಸಮ್ಮುಖದಲ್ಲಿ ನಡೆಯಲಿದೆ.
ಮಾಜಿ ಪೊಲೀಸ್ ಆಯುಕ್ತ ಪಿ.ಜಿ. ಹರ್ಲಂಕರ್ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದು, ಅವರ ಕುಟುಂಬದವರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.