ನ್ಯೂಡೆಲ್ಲಿ: ಕೇಂದ್ರ ಮಾಜಿ ಸಚಿವ ಹಿರಿಯ ಸಮಾಜವಾದಿ ನಾಯಕ ಡಾ.ರಘುವಂಶ ಪ್ರಸಾದ್ ಸಿಂಗ್ (74) ಭಾನುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.
ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ನ್ಯೂಡೆಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಜೂನ್ 17ರಂದು ಅವರಿಗೆ ಕೋವಿಡ್-19 ಕಂಡುಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯವರಾದ ಪ್ರಸಾದ್ ಸಿಂಗ್, ಯುಪಿಎ ಸರ್ಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.ಆರ್ ಜೆಡಿಯಲ್ಲಿ ಭಿನ್ನಾಭಿಪ್ರಾಯ ಬಂದು ಇತ್ತೀಚೆಗೆ ಅವರು ಪಕ್ಷ ತೊರೆದಿದ್ದರು. ನಾನು 32 ವರ್ಷ ಲಾಲೂ ಪ್ರಸಾದ್ ಯಾದವ್ ಜೊತೆಗಿದ್ದು, ಆದರೆ ಈಗ ನನ್ನನ್ನು ಕ್ಷಮಿಸಿ, ನಾನು ಬಿಟ್ಟುಹೋಗುತ್ತೇನೆ ಎಂದು ಜೈಲಿನಲ್ಲಿರುವ ಲಾಲೂ ಪ್ರಸಾದ್ ಯಾದವ್ ಗೆ ಪತ್ರ ಬರೆದಿದ್ದರು.
ಐದು ಬಾರಿ ವೈಶಾಲಿ ಕ್ಷೇತ್ರದ ಸಂಸದರಾಗಿದ್ದ ರಘುವಂಶ್ ಪ್ರಸಾದ್ 2014ರ ಚುನಾವಣೆಯಲ್ಲಿ ಮತ್ತು ಕಳೆದ ವರ್ಷದ ಚುನಾವಣೆಯಲ್ಲಿ ಕೂಡ ಸೋತಿದ್ದರು.
ಇತ್ತೀಚೆಗೆ ಮೂರು ಬಾರಿ ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಪತ್ರ ಬರೆದು ವೈಶಾಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸುವಂತೆ ಮತ್ತು ನರೇಗಾ ಕಾನೂನಿಗೆ ತಿದ್ದುಪಡಿ ವಿಧೇಯಕವನ್ನು ತರುವಂತೆ ಒತ್ತಾಯಿಸಿದ್ದರು. ನೈತಿಕ ರಾಜಕೀಯ ಇತ್ತೀಚಿನ ದಿನಗಳಲ್ಲಿ ಅಧಃಪತನವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಸಂತಾಪ
ಪ್ರಸಾದ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರ ನಿಧನವು ಬಿಹಾರ ರಾಜ್ಯದ ರಾಜಕೀಯ ಮತ್ತು ದೇಶದ ರಾಜಕೀಯ ಪರಂಪರೆಗೆ ತುಂಬಲಾರದ ನಷ್ಟ ಎಂದಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಸಂತಾಪ
ಕೇಂದ್ರ ಮಾಜಿ ಸಚಿವ ಮತ್ತು ನನ್ನ ಆತ್ಮೀಯ ಗೆಳೆಯ ಡಾ.ರಘುವಂಶ ಪ್ರಸಾದ್ ಸಿಂಗ್ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ನರೇಗಾ ಯೋಜನೆ ಅನುಷ್ಠಾನಕ್ಕೆ ಅವರ ಕೊಡುಗೆ ಅಪಾರ. ದೇವರು ಅವರ ಕುಟುಂಬ ಮತ್ತು ಹಿತೈಷಿಗಳಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ದೇವರಲ್ಲಿ ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.
I am deeply saddened by the demise of former Union Minister and a very close friend of mine Dr. Raghuvansh Prasad Singh. His contribution in implementing MGNREGA scheme is immense. May God give his family and well-wishers the strength to bear this pain.
— H D Devegowda (@H_D_Devegowda) September 13, 2020