ಮೈಸೂರು: ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಮೊದಲು ನಿದ್ದೆಯಿಂದ ಎದ್ದೇಳಲಿ ನಂತರ ಸರ್ಕಾರದ ವಿರುದ್ಧ ಅಭಿಯಾನ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಹಮ್ಮಿಕೊಂಡಿರುವ ನಿದ್ದೆಯಿಂದ ಎದ್ದೇಳು ಸರ್ಕಾರ ಅಭಿಯಾನ ಕುರಿತು ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅವರು ಮೊದಲು ಎದ್ದು ರಾಜ್ಯ ಪ್ರವಾಸ ಮಾಡಲಿ. ಕೋವಿಡ್ ಬಂದಾಗ ಮಲಗಿದ್ದರು, ಮಳೆಯಿಂದ ಪ್ರವಾಹ ಬಂದಾಗಲೂ ಮಲಗಿದ್ದರು. ಈ ಹಿಂದೆ ಐದು ವರ್ಷ ಆಡಳಿತ ಮಾಡಿದಾಗಲೂ ಮಲಗೇ ಇದ್ದರೂ. ಸಭೆಗಳಲ್ಲೂ ಗೊರಕೆ ಹೊಡೆಯುತ್ತಿದ್ದರು. ಆದರೆ ಈಗ ‘ನಿದ್ದೆಯಿಂದ ಎದ್ದೇಳು ಸರ್ಕಾರ’ ಅಭಿಯಾನ ಮಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
ಕೇವಲ ಟ್ವೀಟ್ ಮಾಡೋದಕ್ಕೆ ನಿಮಗೆ ಸರ್ಕಾರದ ಸವಲತ್ತು ಬೇಕಾ? ಪ್ರತಿಪಕ್ಷ ನಾಯಕರಾಗಿ ನಿಮ್ಮ ಜವಾಬ್ದಾರಿ ಏನು? ಐದು ವರ್ಷ ನೀವು ಮುಖ್ಯಮಂತ್ರಿ ಆಗಿದ್ರಿ, ಆಗ ನಿಮ್ಮ ದಿನಚರಿ ಏನಿತ್ತು ಎಂದು ನೆನಪಿಸಿಕೊಳ್ಳಿ. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರ ದಿನಚರಿಯನ್ನು ನೋಡಿ. ಇಬ್ಬರ ದಿನಚರಿಯನ್ನು ಹೋಲಿಸಿ, ಯಾವುದು ಸರಿ ಅಂತ ನೀವೇ ನಿರ್ಧಾರ ಮಾಡಿ ಎಂದು ಟೀಕಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇನ್ನೂ ಆಕ್ಟೀವ್ ಆಗಿದ್ದೇನೆ ಎಂದು ತೋರಿಸಿಕೊಳ್ಳೋದಕ್ಕೆ ಆಗೊಮ್ಮೆ ಈಗೊಮ್ಮೆ ಟ್ವೀಟ್ ಮಾಡುತ್ತಾರೆ. ಪ್ರತಿಪಕ್ಷದ ನಾಯಕರಾಗಿ ಟ್ವೀಟ್ ಮಾಡೋದೆ ನಿಮ್ಮ ಕೆಲಸವೇ? ಮೊದಲು ಸರ್ಕಾರ ಮಾಡುತ್ತಿರುವ ಒಳ್ಳೆ ಕೆಲಸಗಳ ಬಗ್ಗೆ ನೋಡಿ ನಂತರ ಮಾತನಾಡಿ ಎಂದು ತಿರುಗೇಟು ನೀಡಿದರು.