ಬೆಂಗಳೂರು: ಬೆಳಕಿನ ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದು, ರಾಜ್ಯಾದ್ಯಂತ ಹೊಗೆ ಹೊರಸೂಸುವ ಪಟಾಕಿಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ರಾಜಸ್ತಾನ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಹರಿಯಾಣ ರಾಜ್ಯಗಳಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಲಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡ ಹೊಗೆ ಹೊರಸೂಸುವ ಪಟಾಕಿಗಳ ಮಾರಾಟವನ್ನು ನಿಷೇಧಿಸಲು ಚಿಂತನೆ ನಡೆಸುತ್ತಿದೆ.
ಈ ಬಗ್ಗೆ ಬುಧವಾರ ತಿಳಿದುಬಂದಿದ್ದು, ಅದಕ್ಕೆ ಕಾರಣವನ್ನು ನೀಡಲಾಗುತ್ತಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿರುವವರ ಆರೋಗ್ಯ ಈ ಹೊಗೆಯಿಂದ ಇನ್ನಷ್ಟು ಸಮಸ್ಯೆಗೆ ಸಲುಕುವ ಸಾಧ್ಯತೆ ಇದೆ. ಹೀಗಾಗಿ ಕೋವಿಡ್ -19 ಕುರಿತ ತಾಂತ್ರಿಕ ಸಮಿತಿಯ ಸದಸ್ಯರು ಸೇರಿ ಆರೋಗ್ಯ ತಜ್ಞರೊಂದಿಗೆ ಸರ್ಕಾರ ಹಲವು ಸುತ್ತಿನ ಸಭೆಗಳನ್ನೂ ನಡಿಸಿದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಹಲವು ತಜ್ಞರು ಪಟಾಕಿಗಳು ಈಗಾಗಲೇ ಸೋಂಕಿಗೆ ಒಳಗಾದವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ. ಹೀಗಾಗಿಯೇ ರಾಜ್ಯಾದ್ಯಂತ ಹೊಗೆ ಹೊರಸೂಸುವ ಪಟಾಕಿಗಳನ್ನು ನಿಷೇಧಿಸುವ ಸಾಧ್ಯತೆ ಹೆಚ್ಚಾಗಿದೆ.
ಕೋವಿಡ್ -19 ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ, ವೈರಸ್ನಿಂದ ಚೇತರಿಸಿಕೊಂಡವರು ಪಟಾಕಿಗಳು ಹೊರಸೂಸುವ ಹೊಗೆಯಿಂದ ಮತ್ತಷ್ಟು ದುರ್ಬಲರಾಗುತ್ತಾರೆ. ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ರೋಗನಿರೋಧಕ ಶಕ್ತಿ ಮತ್ತು ಉಸಿರಾಟದ ವ್ಯವಸ್ಥೆಯು ಇನ್ನೂ ದುರ್ಬಲಗೊಂಡಿರುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಹೊಗೆ ಹೊರಸೂಸುವ ಪಟಾಕಿಗಳನ್ನು ಹೊಡೆಯುವುದು ಅಪಾಯಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಅಭಿಪ್ರಾಯದ ಪರವಾಗಿರುವ ಸಚಿವ ಸುಧಾಕರ್ ಅವರು ಇದೀಗ ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮಾತುಕತೆ ನಡೆಸಲಿದ್ದು, ಪಟಾಕಿ ಮಾರಾಟ ನಿಷೇಧಿಸುವ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ “ಸಿಎಂ ಅವರೊಂದಿಗೆ ಸಭೆ ನಿಗದಿಪಡಿಸಲಾಗಿದ್ದು, ಯಡಿಯುರಪ್ಪ ಅವರೊಂದಿಗೆ ಚರ್ಚಿಸಿ ಆರೋಗ್ಯ ಸಚಿವರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.