ಹಾಸನ: ಹಾಸನಾಂಬೆ ಹಾಗೂ ಸಿದ್ದೇಶ್ವರ ಸ್ವಾಮಿಯ ಉತ್ಸವ ಗುರುವಾರ ವಿಜೃಂಭಣೆಯಿಂದ ಆರಂಭಗೊಂಡಿದೆ. ನಗರದ ಅದಿದೇವತೆ ದರ್ಶನವನ್ನು ಭಕ್ತರು ನೇರಪ್ರಸಾರದ ಮೂಲಕವೇ ಕಣ್ತುಂಬಿಕೊಳ್ಳುತ್ತಿದ್ದಾರೆ.
ಪ್ರತೀ ಬಾರಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದಂತ ಹಾಸನಾಂಬೆ ದೇವಾಲಯಕ್ಕೆ ಕೊರೊನಾ ಕಾರಣದಿಂದ ಈ ಬಾರಿ ನೇರದರ್ಶನ ಅವಕಾಶವನ್ನು ಮಿತಿಗೊಳಿಸುವಂತಾಗಿದೆ. ಆದರೆ ಸಂಪ್ರದಾಯ ಹಾಗೂ ಅಲಂಕಾರಗಳಿಗೆ ಕೊಂಚವೂ ಕಡಿಮೆಯಾಗದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ದೇವಾಲಯ ಹಲವು ಬಗೆಯ ಪುಷ್ಪಾಲಂಕಾರಗಳಿಂದ ಅಲಂಕೃತಗೊಂಡು ರಾರಾಜಿಸುತ್ತಿದೆ.
ಹಲವು ದಿನಗಳಿಂದ ಜಿಲ್ಲಾಡಳಿತ ಹಾಸನಾಂಬೆ ಉತ್ಸವಕ್ಕೆ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡು, ಕೊರೋನ ಹಿನ್ನೆಲೆಯಲ್ಲಿ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಸಾರ್ವಜನಿಕರ ಹಿತದೃಷ್ಠಿಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಅತ್ಯಂತ ಆಕರ್ಷಕವಾಗಿ ಉತ್ಸವವನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಯಿತು.
ಸಾರ್ವಜನಿಕರಿಗೆ ದೇವಸ್ಥಾನದ ಆವರಣದಲ್ಲಿ ಹಾಗೂ ನಗರದ ವಿವಿಧ ಭಾಗಗಳಲ್ಲಿ ಎಲ್.ಇ.ಡಿ ಪರದೆಗಳ ಮೂಲಕ ಹಾಗೂ ಆನ್‍ಲೈನ್ ನೇರಪ್ರಸಾರದ ಮೂಲಕ ದೇವರ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ನೂರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ಎಲ್.ಇ.ಡಿ ಪರದೆಯಲ್ಲಿಯೇ ದೇವಿ ದರ್ಶನ ಪಡೆದು, ವ್ಯವಸ್ಥೆಗಾಗಿ ಸಂತಸ ವ್ಯಕ್ತಪಡಿಸಿದರು.
ಪ್ರತೀ ವರ್ಷದಂತೆ ಈ ಬಾರಿಯೂ ಸಕಲ ವಿಧಿಗಳ ಆಚರಣೆಗಳನ್ನು ನಡೆಸಲಾಯಿತು. ನಂಜರಾಜ ಅರಸು ಅವರು ಬಾಳೆ ಕಂದನ್ನು ಕಡಿದರು. ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಿ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು.
ಜಿಲ್ಲಾ ಉಸ್ತವಾರಿ ಸಚಿವರಾದ ಕೆ. ಗೋಪಾಲಯ್ಯ, ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವಾರಾದ ಜೆ.ಸಿ ಮಾಧುಸ್ವಾಮಿ, ಶಾಸಕರಾದ ಪ್ರೀತಂ ಜೆ. ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ಜಡ್ಜ್ ನ್ಯಾ|| ಬಸವರಾಜ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾದ ಸ್ವರೂಪ್ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್ ನಂದಿನಿ ಮಾಜಿ ನಾಯಕರಾದ ಹೆಚ್.ಎಂ ವಿಶ್ವನಾಥ್ ಹಾಗೂ ಮತ್ತಿತರರು ದೇವಿ ದರ್ಶನ ಪಡೆದರು.