ಹಾಸನ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಇಂದು ಹೇಮಾವತಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು.
ಗೊರೂರಿನ ಹೇಮಾವತಿ ಅಣೆಕಟ್ಟೆಗೆ ಬಾಗಿನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಗೋಪಾಲಯ್ಯ ಅವರು ಹೇಮಾವತಿ ಜಲಾಶಯದಿಂದ ತುಮಕೂರು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಿಗೆ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದರು.
ಸುಮಾರು 5,500 ಕ್ಯೂಸೆಕ್ ನೀರನ್ನು ಈ ಬಾರಿ ಜಲಾಶಯದಿಂದ ಬಿಡಲಾಗಿದ್ದು, ಪೂರ್ವ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕನಿಷ್ಟ 10 ದಿನಗಳವರೆಗೂ ನೀರು ಬಿಡಲಾಗುವುದು ಎಂದು ಹೇಳಿದರು.
.ಸಿ ಮಾಧುಸ್ವಾಮಿ ಮಾತನಾಡಿ ಪೂರ್ವ ಭಾಗದ ರೈತರು ಅನಾವೃಷ್ಠಿಯಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಅಂತರ್ಜಲದ ಮಟ್ಟವೂ ಸಹ ಬಹಳಷ್ಟು ಕುಸಿದಿದೆ. ಇದರಿಂದ ಸಂಪೂರ್ಣವಾಗಿ ಹೇಮಾವತಿ ಜಲಾಶಯದ ಮೇಲೆ ರೈತರು ಅವಲಂಭಿತರಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕೇವಲ ಶೇ.1 ರಷ್ಟು ಜಿ.ಡಿ.ಪಿ ಹೆಚ್ಚಾದರೂ ಸಹ ಅದು ಶೇ. 4 ರಷ್ಟು ಹೆಚ್ಚಾದಂತೆ. ರೈತನ ವರಮಾನ ಹೆಚ್ಚಾದರೆ, ಕೈಗಾರಿಕೆಯಿಂದ ಸರ್ಕಾರಕ್ಕೆ ಬರುವ ಆದಾಯಕ್ಕೂ 4 ಪಟ್ಟು ಹೆಚ್ಚು ಆದಾಯ ದೊರೆಯುತ್ತದೆ ಎಂದು ಹೇಳಿದರು.
ನಾಲೆ ಮೂಲಕ ಹೇಮಾವತಿ ಜಲಾಶಯದ ನೀರನ್ನು ಬಿಡುವುದರಿಂದ ಬೆಂಗಳೂರು ಹಾಗೂ ತುಮಕೂರು ಸೇರಿದಂತೆ ವಿವಿಧ ಭಾಗಗಳಿಗೆ ಕುಡಿಯುವ ನೀರಿನ ಪೂರೈಕೆಯಾಗುತ್ತದೆ. ಕಳೆದ ಮೂರು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿದ್ದು, ಬರದ ನಾಡೆಂದೇ ಕರೆಯಲಾಗುವ ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಉಲ್ಬಣ ಸಂಭವಿಸಿಲ್ಲ, ಹಾಗಾಗಿ ಈ ಬಾರಿ ನಮ್ಮ ಜಿಲ್ಲೆಯ ಪರವಾಗಿ ನಾನೂ ಕೂಡ ಹೇಮಾವತಿ ನದಿಗೆ ಬಾಗಿಣ ಸಲ್ಲಿಸಿದ್ದೇನೆ ಎಂದು ಜೆ.ಸಿ ಮಾಧುಸ್ವಾಮಿ ಹೇಳಿದರು.
ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ ಈ ಬಾರಿಯ ಅತಿವೃಷ್ಠಿಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅನಾಹುತಗಳು ಸಂಭವಿಸದೇ ಇದ್ದರೂ ಸಹ ಆಲೂರು, ಸಕಲೇಶಪುರ, ಅರಕಲಗೂಡು, ಬೇಲೂರು ಹಾಗೂ ಮೂಡಿಗೆರೆ ತಾಲೂಕುಗಳಲ್ಲಿ ರಸ್ತೆಗಳು, ಕಾಫಿ ಹಾಗೂ ಮೆಣಸು ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆಯಾ ತಾಲೂಕುಗಳಿಗೆ ಬೆಳೆ ಪರಿಹಾರಕ್ಕೆ ಕನಿಷ್ಠ 100 ಕೋಟಿ ರೂ. ಹಾಗೂ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂಗಳನ್ನು ಮೀಸಲಿಡಬೇಕು ಎಂದರು.
ಕಾವೇರಿ ನೀರಾವರಿ ನಿಗಮ, ಹೇಮಾವತಿ ಅಣೆಕಟ್ಟು ವಿಭಾಗ ಹಾಗೂ ಪುನರ್ವಸತಿ ವಿಭಾಗಕ್ಕೆ ಕಳೆದ ಬಾರಿ ಸುಮಾರು 72 ಕೋಟಿ ರೂ ಅಂದಾಜು ಮೊತ್ತದಲ್ಲಿ 172 ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಿದ್ದೆವು, ಈ ಬಾರಿಯೂ ಸಹ ಸುಮಾರು 32 ಕೋಟಿ ರೂ ಅಂದಾಜು ಮೊತ್ತದಲ್ಲಿ 62 ಕಾಮಗಾರಿಗಳಿಗೆ ಮಂಜೂರಾತಿ ಕೇಳಿದ್ದೇವೆ. ಈ ಬಾರಿ ಕಾಮಗಾರಿಗಳನ್ನು ಮಂಜೂರು ಮಾಡಿಕೊಡಬೇಕು ಎಂದು ಸಚಿವರಲ್ಲಿ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಶಾಸಕರಾದ ಸಿ.ಎನ್ ಬಾಲಕೃಷ್ಣ, ಎ.ಟಿ ರಾಮಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಎನ್ ನಂದಿನಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.