ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ರಾಜಾಜಿನಗರ ಮತ್ತು ಮಲ್ಲೇಶ್ವರ ವಾರ್ಡ್ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ಬಳಿಯ 100 ಮೀಟರ್ ಒಳಗಿನ ಪ್ರದೇಶ, ಬೇಕರಿಗಳು, ಟೀ ಅಂಗಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಡಿ, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಗಿದೆ.
ಪಶ್ಚಿಮ ವಲಯ ವ್ಯಾಪ್ತಿಯ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ನೇತೃದಲ್ಲಿ ಕೋಟ್ಪಾ ಕಾಯಿದೆ 2003ರನ್ನು ಉಲ್ಲಂಘನೆ ಮಾಡಿ, ಬಿಡಿ, ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.
ಅದರಂತೆ ರಾಜಾಜಿನಗರ ಆರ್.ಟಿ.ಒ ವ್ಯಾಣಿಜ್ಯ ಸಂಕೀರ್ಣ, ಪಿಇಎಸ್ ಕಾಲೇಜು ಹಾಗೂ ಇನ್ನಿತರೆ ಶಾಲಾ-ಕಾಲೇಜು ಸುತ್ತಮುತ್ತ ಹಾಗೂ ಮಲ್ಲೇಶರ ಬಡವಾಣೆಯಲ್ಲಿ ದಾಳಿ ನಡೆಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 15 ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಕೋಟ್ಪಾ ಕಾಯಿದೆ ಉಲ್ಲಂಘಿಸಿ ಧೂಮಪಾನ ಮಾಡುತ್ತಿದ್ದ 8 ಸಾರ್ವಜನಿಕರಿಗೆ ಒಟ್ಟು 6,700 ರೂಗಳನ್ನು ದಂಡ ವಿಧಿಸಲಾಯಿತು.
ಮುಂದುವರಿದು, ಕಾಯಿದೆ ಉಲ್ಲಂಘಿಸಿ ಶಾಲಾ-ಕಾಲೇಜು ಸುತ್ತಮುತ್ತಲಿನ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡಿದಲ್ಲಿ ಅಂಗಡಿಯ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ವಲಯದ ಆರೋಗ್ಯಾಧಿಕಾರಿ ಡಾ. ಮನೋರಂಜನ್ ಹೆಗ್ಡೆ ಎಚ್ಚರಿಕೆ ನೀಡಿದರು.
ದಾಳಿಯಲ್ಲಿ ವಲಯದ ರಾಜಾಜಿನಗರದ ವೈದ್ಯಕೀಯ ಆರೋಗ್ಯಾಧಿಕಾರಿ ಡಾ. ಮಂಜುಳಾ, ಬಿಬಿಎಂಪಿ ಆರೋಗ್ಯ ನೀರಿಕ್ಷಕರು, ತಂಬಾಕು ನಿಯಂತ್ರಣ ಕೋಶದ ಕೇಂದ್ರ ಕಚೇರಿ ಸಿಬ್ಬಂದಿ ಮತ್ತು ಮಾರ್ಷಲ್ ಗಳು ಇದ್ದರು.