ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಂದ ಪರಿಹಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರವು ‘ಸಂಧ್ಯಾ ಸುರಕ್ಷಾ ಯೋಜನೆ’ಯಡಿ ಕೋವಿಡ್‌ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ(ಬಿಪಿಎಲ್) ಕುಟುಂಬದ ಒಬ್ಬ ಕಾನೂನು ಬದ್ಧ ವಾರಸುದಾರರಿಗೆ 1 ಲಕ್ಷ ರೂ.ಗಳ ಪರಿಹಾರ.
ಮತ್ತು ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಗಳ ಕಾನೂನುಬದ್ಧ ವಾರಸುದಾರರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ‘ರಾಜ್ಯ ವಿಪತ್ತು ಪರಿಹಾರ ನಿಧಿ’ (ಎಸ್‌ಡಿಆರ್‌ಎಫ್)ಯಡಿ ರೂ. 50 ಸಾವಿರ ರೂ. ಗಳನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ (ಡಿಬಿಟಿ) ಮೂಲಕ ಪಾವತಿಸಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕು ತಹಸೀಲ್ದಾರ್ ಕಚೇರಿಗಳಲ್ಲಿ ಕಾನೂನುಬದ್ಧ ವಾರಸುದಾರರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು.
ಅರ್ಜಿದಾರರು ನಿಗದಿಪಡಿಸಿದ ನಮೂನೆ-1(ಫಾರಂ-1)ರಲ್ಲಿ ಮೃತ ವ್ಯಕ್ತಿ ಮತ್ತು ಅರ್ಜಿದಾರರ ವಿವರಗಳು ಹಾಗೂ ದಾಖಲೆಗಳಾದ ಕೋವಿಡ್-19 ಪಾಸಿಟಿವ್ ವರದಿ ಮತ್ತು ಕೋವಿಡ್ ರೋಗಿ ಸಂಖ್ಯೆ(ಬಿ.ಯು. ಸಂಖ್ಯೆ), ಮರಣ ಪ್ರಮಾಣ ಪತ್ರ ಅಥವಾ ಮರಣ ಕಾರಣ ಪ್ರಮಾಣ ಪತ್ರ (ಫಾರಂ-4/4ಎ), ಮೃತ ವ್ಯಕ್ತಿಯ ಆಧಾರ್ ಪ್ರತಿ ಅಥವಾ ಇತರೆ ಗುರುತಿನ ಪತ್ರಗಳು.
ಮೃತ ವ್ಯಕ್ತಿಯ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ), ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ(ರಾಜ್ಯ ಸರ್ಕಾರದ ಪರಿಹಾರ ಮೊತ್ತಕ್ಕಾಗಿ), ಅರ್ಜಿದಾರರ ಬ್ಯಾಂಕ್ / ಅಂಚೆ ಖಾತೆ ಪುಸ್ತಕ ಪ್ರತಿ, ಅರ್ಜಿದಾರರ ಸ್ವಯಂ ಘೋಷಣಾ ಪತ್ರ (ಫಾರಂ-2).
ಮೃತ ವ್ಯಕ್ತಿಯ ಪತಿ/ ಪತ್ನಿಯನ್ನು ಹೊರತುಪಡಿಸಿ, ಕುಟುಂಬದ ಇತರೆ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ ಕುಟುಂಬದ ಉಳಿದ ಸದಸ್ಯರಿಂದ ನಿರಾಕ್ಷೇಪಣಾ ಪತ್ರ(ಫಾರಂ-3) ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಳಿಸಿದ್ದಾರೆ.