ನ್ಯೂಡೆಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಅತಿವೇಗದಲ್ಲಿ ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ಹೊಸ ರೂಪಾಂತರಿಯ ಬಗ್ಗೆ ತಜ್ಞರು ನೀಡುತ್ತಿರುವ ಹೇಳಿಕೆ ಜನರಲ್ಲಿ ಸಮಾಧಾನ ತರುತ್ತಿದೆ. ಇದು ಬಹುಬೇಗ ಹರಡಿದರೂ ಮಾರಣಾಂತಿಕವಲ್ಲ ಎಂದು ದೃಢಪಡಿಸಿದ್ದಾರೆ ತಜ್ಞರು.
ಹಲವು ತಜ್ಞರು ಓಮಿಕ್ರಾನ್ ಬಗ್ಗೆ ಹೇಳಿಕೆಯನ್ನು ನೀಡುತ್ತಿದ್ದು, ಜನರು ಭಯ ಪಡುವ ಅವಶ್ಯಕತೆಯಿಲ್ಲ, ಇದು ಸಾಂಕ್ರಾಮಿಕ ರೋಗದ ಅಂತ್ಯಕಾಲದ ಮೊದಲ ಹೆಜ್ಜೆ ಇರಬಹುದು ಎನ್ನುವ ಶುಭಸುದ್ದಿಯನ್ನು ನೀಡಿದ್ದಾರೆ.
ಈ ನಡುವೆ ಹಲವು ತಜ್ಞರು ಓಮಿಕ್ರಾನ್ ವೈರಸ್ ಬಗ್ಗೆ ಮಾತನಾಡಿದ್ದು, ಓಮಿಕ್ರಾನ್ ಜಾಗತಿಕ ಪ್ಯಾಂಡಮಿಕ್ ನ ‘ಎಂಡೆಮಿಕ್’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಕಾರಣ ಈ ವೈರಸ್ ಪ್ರಾಣ ಹಾನಿ ಮಾಡುವುದಿಲ್ಲ ಎನ್ನುವುದು ಒಂದು ಕಡೆ. ಇನ್ನೊಂದು ಕಡೆ, ಇದರಿಂದ ತೀವ್ರವಾದ ರೋಗ ಲಕ್ಷಣಗಳು ಇದುವರೆಗೆ ಎಲ್ಲೂ ವರದಿಯಾಗಿಲ್ಲ. ಹಾಗಾಗಿ, ಜನರು ಕೋವಿಡ್ ನಿಯಮಗಳನ್ನು ಪಾಲಿಸಿದರೆ ಸಾಕು, ಭಯ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಓಮಿಕ್ರಾನ್ ಎನ್ನುವುದು ಸಾಮಾನ್ಯ ಸೋಂಕ್ (ಎಂಡೆಮಿಕ್) ಆಗಿ ಜಗತ್ತಿನಲ್ಲಿ ಉಳಿಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗುವ ಸಾಧ್ಯತೆಯಿದೆ. ಆದರೆ, ಈ ಸೋಂಕಿನ ಸಂಪೂರ್ಣ ಅಂತ್ಯ ಯಾವಾಗ ಎನ್ನುವುದನ್ನು ಈಗಲೇ ಹೇಳುವುದು ಅವಸರವಾದೀತು.
ಈಗಾಗಲೇ ಜಗತ್ತಿನಲ್ಲಿ ಬಂದು ಹೋಗಿರುವ ಸಿಡುಬು ಮುಂತಾದ ಕಾಯಿಲೆಗಳನ್ನು ಎಂಡೆಮಿಕ್ ಪಟ್ಟಿಗೆ ಸೇರಿಸಬಹುದು ಎನ್ನುವ ಅಭಿಪ್ರಾಯವನ್ನು ಸಾಂಕ್ರಾಮಿಕ ರೋಗದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಓಮಿಕ್ರಾನ್ ವೇಗವಾಗಿ ಹರಡುವ ಶಕ್ತಿಯನ್ನು ಹೊಂದಿದ್ದರೂ, ಇದು ಡೆಲ್ಟಾದಷ್ಟು ಅಪಾಯಕಾರಿಯಲ್ಲ ಎಂದು ಅಮೆರಿಕಾದ ಅಧ್ಯಕ್ಷರ ವೈದ್ಯಕೀಯ ಸಲಹೆಗಾರರಾಗಿರುವ ಆಂಥೋನಿ ಗೌಸ್ ಕೂಡಾ ಹೇಳಿದ್ದಾರೆ.
ಓಮಿಕ್ರಾನ್ ತಳಿ ಸೌಮ್ಯವಾಗಿರುತ್ತದೆ ಮತ್ತು ಹಿಂದಿನ ತಳಿಗಳಂತೆ ಮಾರಣಾಂತಿಕವಲ್ಲ, ಆದರೆ ತೀವ್ರತೆಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ಗೌಸ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ರೂಪಾಂತರದಲ್ಲಿ S ಜೀನ್ ಇರುವುದಿಲ್ಲ ಎಂದು ಹೇಳಿದೆ. ಈ ಹೊಸ ರೂಪಾಂತರದೊಂದಿಗೆ ಕಂಡುಬಂದ ವೈರಸಿನ ಲಕ್ಷಣಗಳೆಂದರೆ, ಗಂಟಲು ಕೆರೆತ, ವಿಪರೀತ ಸುಸ್ತು, ಲಘು ಜ್ವರ. ಇದು ಸೋಂಕಿತರಿಗೆ ತೀವ್ರ ಅನಾರೋಗ್ಯವನ್ನು ತಂದೊಡ್ಡಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ ಎನ್ನುವುದು ಗಮನಿಸಬೇಕಾದ ವಿಚಾರ.
ಇನ್ನು 24 ಗಂಟೆಯಲ್ಲಿ 9,525 ಜನರು ಗುಣಮುಖರಾಗಿ, 195 ಜನರು ಮೃತಪಟ್ಟಿದ್ದಾರೆ. ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ಕೆಲವೊಂದು ದೇಶದಲ್ಲಿ ಈಗಾಗಲೇ ಆರಂಭವಾಗಿದೆ. ಓಮಿಕ್ರಾನ್ ಮಕ್ಕಳಿಗೆ ಎಷ್ಟು ಅಪಾಯಕಾರಿ ಎನ್ನುವುದಕ್ಕೆ ಅಂಕಿಅಂಶಗಳು ಸಿಕ್ಕ ನಂತರವಷ್ಟೇ ಸ್ಪಷ್ಟತೆ ಸಿಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.