ಕೋಲಾರ: ಭಾರತದಲ್ಲಿ ಈಗ ಕೊರೊನಾ ಲಸಿಕೆಯ ತೀವ್ರ ಕೊರತೆ ಇದೆ. ಸ್ವದೇಶಿ ಲಸಿಕಾ ಕಂಪನಿಯಾದ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಈಗ ಮಾಲೂರು ಘಟಕದಲ್ಲಿ ಹೊಸ ಡೆಡ್ಲೈನ್ ಹಾಕಿಕೊಂಡಿದೆ.
ಭಾರತ್ ಬಯೋಟೆಕ್ ಕಂಪನಿಯು ಸದ್ಯ ತಿಂಗಳಿಗೆ 2.5 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಉತ್ಪಾದಿಸುತ್ತಿದೆ. ಆದರೆ, ಕೇಂದ್ರ ಸರ್ಕಾರವು ಭಾರತ್ ಬಯೋಟೆಕ್ ಕಂಪನಿಯು ಪ್ರತಿ ತಿಂಗಳು 10 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸಬೇಕು ಎಂದು ನಿರೀಕ್ಷಿಸಿದೆ.
ಅದಕ್ಕಾಗಿ ಭಾರತ್ ಬಯೋಟೆಕ್ ಕಂಪನಿಯು ತನ್ನ ಕರ್ನಾಟಕದ ಕೋಲಾರದ ಮಾಲೂರು ಘಟಕದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆಗೆ ಈ ಹಿಂದೆಯೇ ನಿರ್ಧರಿಸಿತ್ತು. ಜೂನ್ ತಿಂಗಳ ವೇಳೆಗೆ ಮಾಲೂರು ಘಟಕದಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಆರಂಭಿಸುವುದಾಗಿ ಹೇಳಿತ್ತು. ಆದರೆ, ಜೂನ್ ತಿಂಗಳಲ್ಲಿ ಲಸಿಕೆ ಉತ್ಪಾದನೆ ಆರಂಭವಾಗಿಲ್ಲ.
ಭಾರತ್ ಬಯೋಟೆಕ್ ಕಂಪನಿಯ ಹೊಸ ಡೆಡ್ಲೈನ್ ಪ್ರಕಾರ, ಜುಲೈ ಅಂತ್ಯ ಇಲ್ಲವೇ ಆಗಸ್ಟ್ ತಿಂಗಳ ಆರಂಭದಲ್ಲಿ ಮಾಲೂರು ಘಟಕದಲ್ಲಿ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಆರಂಭವಾಗಬೇಕಿದೆ. ನಿರೀಕ್ಷೆಯಂತೆ ಜುಲೈ ಅಂತ್ಯ ಇಲ್ಲವೇ ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಮಾಲೂರು ಘಟಕದಲ್ಲೇ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಆರಂಭವಾಗುತ್ತೆ ಎಂಬ ವಿಶ್ವಾಸವನ್ನು ಭಾರತ್ ಬಯೋಟೆಕ್ ಕಂಪನಿಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕೋಲಾರದ ಮಾಲೂರು ಘಟಕದಲ್ಲಿ ಪ್ರತಿ ತಿಂಗಳು 1 ರಿಂದ 1.2 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆಯನ್ನು ಉತ್ಪಾದಿಸುವ ಸಾಮರ್ಥ್ಯ ಇದೆ. ಈ ಮೊದಲು ಮಾಲೂರು ಘಟಕದಲ್ಲಿ ಪ್ರಾಣಿಗಳ ಲಸಿಕೆಯನ್ನು ಉತ್ಪಾದಿಸಲಾಗುತ್ತಿತ್ತು. ಆದರೆ ಈಗ ಕೊರೊನಾದಿಂದ ಭಾರತ ಮಾತ್ರವಲ್ಲದೇ, ವಿಶ್ವದಲ್ಲೇ ಕೊರೊನಾ ಲಸಿಕೆಗೆ ಬಾರಿ ಬೇಡಿಕೆ ಬಂದಿದೆ.
ಕೊರೊನಾದಿಂದ ವಿಶ್ವ ಪಾರಾಗಲು ಕೊರೊನಾ ಲಸಿಕೆಯೇ ರಾಮಬಾಣ. ಹೀಗಾಗಿ ತನ್ನ ಮಾಲೂರು ಘಟಕದಲ್ಲಿ ಪ್ರಾಣಿಗಳ ಲಸಿಕೆ ತಯಾರಿಯನ್ನು ನಿಲ್ಲಿಸಿ, ಕೊರೊನಾ ಲಸಿಕೆಯನ್ನ ಉತ್ಪಾದಿಸಲು ನಿರ್ಧರಿಸಿದೆ. ಈಗಾಗಲೇ ಕರ್ನಾಟಕ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತೆಗೆದುಕೊಳ್ಳಬೇಕಿದ್ದ ಅನುಮತಿಗಳನ್ನು ಪಡೆದುಕೊಂಡಿದೆ. ಮಾಲೂರು ಘಟಕದಲ್ಲೇ ಕೊವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ಆರಂಭವಾದರೆ, ಕರ್ನಾಟಕಕ್ಕೂ ಇಲ್ಲಿಂದಲೇ ಲಸಿಕೆ ಪೂರೈಕೆಯಾಗಲಿದೆ.
ಗುಜರಾತ್ ರಾಜ್ಯದ ಅಂಕಲೇಶ್ವರ್ ಘಟಕದಲ್ಲಿಯೂ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು ಭಾರತ್ ಬಯೋಟೆಕ್ ಪ್ಲ್ಯಾನ್ ಮಾಡಿದೆ. ಆದರೆ, ಗುಜರಾತ್ ಸರ್ಕಾರದಿಂದ ಅಗತ್ಯ ಅನುಮೋದನೆಗಳು ಇನ್ನೂ ಸಿಕ್ಕಿಲ್ಲ.