NEWSಆರೋಗ್ಯನಮ್ಮರಾಜ್ಯ

20 ದಿನಗಳಲ್ಲೇ ನಿರ್ಮಾಣವಾದ ಯಲಹಂಕ ಕೋವಿಡ್‌ ಆಸ್ಪತ್ರೆ: ಲೋಕಾರ್ಪಣೆಗೊಳಿಸಿದ ಸಿಎಂ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೋವಿಡ್‌ ಅಲೆಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೋಯಿಂಗ್‌ ಸಂಸ್ಥೆಯು, ‘ಸೆಲ್ಕೋ’, ‘ಡಾಕ್ಟರ್ಸ್‌ ಫಾರ್‌ ಯು’ ಸಹಯೋಗದೊಂದಿಗೆ ಯಲಹಂಕದಲ್ಲಿ ನಿರ್ಮಿಸಿರುವ 100 ಹಾಸಿಗೆಗಳ ಅತ್ಯಾಧುನಿಕ ಕೋವಿಡ್‌-ಕೇರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಶನಿವಾರ ಉದ್ಘಾಟಿಸಿದರು.

ಆಸ್ಪತ್ರೆ ನಿರ್ಮಾಣಕ್ಕೆ ಕರ್ನಾಟಕ ವಿದ್ಯುತ್‌ ನಿಗಮ ತನ್ನ ಕ್ಯಾಂಪಸ್‌ನಲ್ಲಿ ಜಾಗ ನೀಡಿದ್ದು, ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಇರುವ ಆಸ್ಪತ್ರೆಯನ್ನು ಕೇವಲ 20 ದಿನದೊಳಗೆ ಪೂರ್ಣಗೊಳಿಸಿರುವುದು ವಿಶೇಷ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ,”ಕೋವಿಡ್‌ ಎರಡನೇ ಅಲೆ ನಿಯಂತ್ರಣ, ಚಿಕಿತ್ಸೆ ಹಾಗೂ ಲಸಿಕೆ ಕಾರ್ಯಕ್ರಮದಲ್ಲಿ ಸರ್ಕಾರದ ಜತೆಗೆ ಖಾಸಗಿ ಸಂಸ್ಥೆಗಳು ಹಾಗೂ ಎನ್‌ಜಿಓಗಳು ಕೈ ಜೋಡಿಸಿರುವುದು ಅತ್ಯಂತ ಶ್ಲಾಘನೀಯ ಎಂದರು.

ಬೋಯಿಂಗ್‌ ಸಂಸ್ಥೆಯು ಸೆಲ್ಕೋ’ ಮತ್ತು ‘ಡಾಕ್ಟರ್ಸ್‌ ಫಾರ್‌ ಯು’ ಸಹಯೋಗದೊಂದಿಗೆ ಅತ್ಯಂತ ಕಡಿಮೆ ಸಮಯದಲ್ಲಿ ಕೋವಿಡ್‌-ಕೇರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿರುವುದು ಬಹಳ ಸಂತಸದ ವಿಷಯ. ಕಾರ್ಪೋರೇಟ್‌ ಕಂಪನಿಗಳು ತಮ್ಮ ಸಮುದಾಯಿಕ ಜವಾಬ್ದಾರಿ ಕಾರ್ಯಕ್ರಮದ ಭಾಗವಾಗಿ ಇಂಥ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಅನುಕರಣೀಯ ಎಂದರು.

ಕರ್ನಾಟಕ ವಿದ್ಯುತ್‌ ನಿಗಮದ ಯಲಹಂಕ ಕ್ಯಾಂಪಸ್‌ನಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಕೋವಿಡ್‌ ಕೇರ್‌ ಆಸ್ಪತ್ರೆ ತಲೆ ಎತ್ತಿದೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳಿಗೆ ಕಾರ್ಪೋರೇಟ್‌ ಸಂಸ್ಥೆಗಳು ಎನ್‌ಜಿಓಗಳು ಕೈ ಜೋಡಿಸಿರುವುದು ಸಂತಸದ ವಿಷಯ. ರಾಜ್ಯದ ಆರೋಗ್ಯ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ಸರ್ಕಾರದ ಜತೆ ಇನ್ನಿತರ ಖಾಸಗಿ ಸಂಸ್ಥೆಗಳು ಕೈ ಜೋಡಿಸಲಿ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.

ಆಸ್ಪತ್ರೆ ವೈಶಿಷ್ಟ್ಯ
ಅತಿ ಕಡಿಮೆ ಅವಧಿ ಅಂದರೆ ಕೇವಲ 20 ದಿನಗಳಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಆಸ್ಪತ್ರೆ ನಿರ್ಮಾಣವಾಗಿದ್ದು, ಸೌರ ವ್ಯವಸ್ಥೆಯನ್ನು ಒಳಗೊಂಡಿದೆ. ತಾಪಮಾನ ನಿಯಂತ್ರಿಸಬಲ್ಲ ಮಾದರಿ ವ್ಯವಸ್ಥೆ ಇದೆ. ಔಷಧಾಲಯ, ಪ್ರಯೋಗಾಲಯ, ವಿಶ್ರಾಂತಿ ಕೊಠಡಿ, ದಾದಿಯರ ಕೇಂದ್ರ, ತಾಯಿಯರ ಆರೈಕೆ ಕೇಂದ್ರ ಹಾಗೂ ಸಭಾಂಗಣವನ್ನು ಒಳಗೊಂಡಿದೆ. 10 ಐಸಿಯು ಹಾಸಿಗೆ, 20 ಎಚ್‌ಡಿಯು ಹಾಸಿಗೆಗಳಿವೆ. ಉಳಿದ ಹಾಸಿಗೆಗಳು ವೈದ್ಯಕೀಯ ಆಮ್ಲಜನಕದ ಸಂಪರ್ಕ ಹೊಂದಿವೆ.

ವೆಚ್ಚ, ನಿರ್ವಹಣೆ
ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 5.5 ಕೋಟಿ ರೂ. ವೆಚ್ಚವಾಗಿದ್ದು, ಬೊಯಿಂಗ್‌ ಡಿಫೆನ್ಸ್‌ ಇಂಡಿಯಾ ಪ್ರೈ. ಲಿ 3 ಕೋಟಿ ರೂ., ಸೆಲ್ಕೋ ಫೌಂಡೇಷನ್‌ 2.5 ಕೋಟಿ ರೂ. ನೀಡಿದೆ. ಕರ್ನಾಟಕ ವಿದ್ಯುತ್‌ ನಿಗಮ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯ ಜಾಗ ಒದಗಿಸಿದೆ. ಡಾಕ್ಟರ್ಸ್‌ ಫಾರ್‌ ಯು ಸರ್ಕಾರೇತರ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ ಮತ್ತು ಆರೋಗ್ಯ ಸೇವೆ ಒದಗಿಸುವ ಜವಾಬ್ದಾರಿ ವಹಿಸಿಕೊಂಡಿದೆ.

ಬಿಡಿಎ ಅಧ್ಯಕ್ಷ, ಶಾಸಕ ಎಸ್‌. ಆರ್. ವಿಶ್ವನಾಥ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ರಾಜ್‌ ಕುಮಾರ್‌ ಖತ್ರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಹೆಚ್‌. ಎಂ. ರೇವಣ್ಣಗೌಡ ಉಪಸ್ಥಿತರಿದ್ದರು.

ಕರ್ನಾಟಕ ವಿದ್ಯುತ್‌ ನಿಗಮದ ಯಲಹಂಕ ಕ್ಯಾಂಪಸ್‌ನಲ್ಲಿ ಬೋಯಿಂಗ್‌ ಸಂಸ್ಥೆಯು ‘ಸೆಲ್ಕೋ’, ‘ಡಾಕ್ಟರ್ಸ್‌ ಫಾರ್‌ ಯು’ ಸಹಯೋಗದಲ್ಲಿ ಕೋವಿಡ್‌ -ಕೇರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿರುವುದು ಸ್ವಾಗತಾರ್ಹ. ಕೊವಿಡ್‌ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜತೆ ಶ್ರಮಿಸಿರುವ ಎಲ್ಲರಿಗೂ ಧನ್ಯವಾದ ಅರ್ಪಿಸುವೆ.
l ಪಿ. ರವಿ ಕುಮಾರ್‌,ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ಅತಿ ಕಡಿಮೆ ಅವಧಿಯಲ್ಲಿ ಅತ್ಯಂತ ಶೀಘ್ರವಾಗಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಿಸಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುತ್ತಿರುವ ಇಡೀ ತಂಡದ ಪರಿಶ್ರಮ ಶ್ಲಾಘನೀಯ.
l ಸಲೀಲ್‌ ಗುಪ್ತ, ಬೋಯಿಂಗ್‌ ಡಿಫೆನ್ಸ್‌ ಇಂಡಿಯಾದ ಅಧ್ಯಕ್ಷ

ಈ ಆಸ್ಪತ್ರೆಯ ಸುಸ್ಥಿರತೆಯ ಎಲ್ಲ ಪರಿಕಲ್ಪನೆಗಳನ್ನು ಒಳಗೊಂಡಿದೆ. ಕೊವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಸೌರಶಕ್ತಿಯಂತಹ ಸುಸ್ಥಿರ ಶಕ್ತಿಯು ನಿರ್ಣಾಯಕ ಪಾತ್ರವಹಿಸಲಿದೆ ಎಂಬುದನ್ನು ಈ ಕಟ್ಟಡ ಸಾಬೀತುಪಡಿಸಲಿದೆ.
l ಡಾ. ಹರೀಶ್‌ ಹಂದೆ, ಸೆಲ್ಕೋ ಫೌಂಡೇಷನ್‌ನ ಸಂಸ್ಥಾಪಕ

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?