ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಶ್ರೀಗಂಧ ಮರಗಳು ಕನ್ನಡ ನಾಡಿನ ಪರಂಪರೆಯ ಸಂಕೇತವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ನಗರದ ಅಶೋಕಪುರಂನ ಅರಣ್ಯಭವನದಲ್ಲಿ ಸೋಮವಾರ ದೇಶದಲ್ಲೇ ಮೊಟ್ಟ ಮೊದಲ ಶ್ರೀಗಂಧದ ವಸ್ತು ಸಂಗ್ರಹಾಲಯ ಉದ್ಘಾಟಿಸಿ ಮಾತನಾಡಿದರು.
ಶ್ರೀಗಂಧದ ಬೀಡು ಎಂದೇ ಪ್ರಸಿದ್ಧವಾಗಿರುವ ಕರ್ನಾಟಕದ ಈ ಅಮೂಲ್ಯ ಪರಿಣಾಮದಿಂದಾಗಿ ಸಾರ್ವಜನಿಕರು ಹಾಗೂ ರೈತರು ತಾಂತ್ರಿಕ ಪರಿಣಿತಿ ಹಾಗೂ ಹೊಸ ತಂತ್ರಜ್ಞಾನವನ್ನು ಬಳಸಿ ಮರಗಳನ್ನು ಬೆಳೆಸಲು ಇನ್ನಷ್ಟು ಉತ್ಸುಕರಾಗುವಂತೆ ಮಾಡುವುದೇ ಶ್ರೀಗಂಧದ ವಸ್ತು ಸಂಗ್ರಹಾಲಯ ಧ್ಯೇಯೋದ್ದೇಶವಾಗಿದೆ ಎಂದು ಹೇಳಿದರು.
ಶ್ರೀಗಂಧದ ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಲು ರೈತರಿಗೆ ಕರ್ನಾಟಕ ಸರ್ಕಾರವು ಅರಣ್ಯ ಪ್ರದೇಶ ನೀಡುತ್ತಿದೆ. ಹೀಗಾಗಿ, ಶ್ರೀಗಂಧದ ಅಭಿವೃದ್ಧಿಗಾಗಿ ಅರಣ್ಯ ಇಲಾಖೆಯೂ ಹೆಚ್ಚಿನ ಆಸಕ್ತಿವಹಿಸಿ ಕಾಯ್ದೆಗೆ ತಿದ್ದುಪಡಿ ತಂದು ಮುಕ್ತ ಅವಕಾಶ ಹಾಗೂ ಸಂಪೂರ್ಣ ಸಹಕಾರ ನೀಡಲು ಮುಂದಾಗಿದೆ ಎಂದರು.
ಶ್ರೀಗಂಧದ ಸಂಪತ್ತು ನಮ್ಮ ರಾಜ್ಯದಿಂದಲೇ ಕಣ್ಮರೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶ್ರೀಗಂಧವನ್ನು ನಾವು ಛಾಯಾಚಿತ್ರಗಳಲ್ಲಿ ಹಾಗೂ ವಸ್ತು ಸಂಗ್ರಹಾಲಯಗಳಲ್ಲಿ ಮಾತ್ರ ನೋಡುವ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಶ್ರೀಗಂಧವನ್ನು ಬೆಳೆಸಲು ಹಾಗೂ ರಕ್ಷಿಸುವ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಇನ್ನು ಶ್ರೀಗಂಧದ ಕೊರತೆಯಿಂದಾಗಿ ಅದರ ಬೆಲೆಯು ಹೆಚ್ಚಾಗಲಿದೆ. ಆದ್ದರಿಂದ ಶ್ರೀಗಂಧದ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಿ, ಅದನ್ನು ಬೆಳೆಸಿ ರಕ್ಷಿಸುವ ಕಾರ್ಯದಲ್ಲಿ ಸರ್ಕಾರವು ಪ್ರಮುಖ ಪಾತ್ರ ವಹಿಸಲಿದೆ. ರೈತರು ಈ ಬೆಳೆಯತ್ತ ಹೆಚ್ಚಿನ ಗಮನ ನೀಡಬೇಕು ಎಂದು ಕರೆ ನೀಡಿದರು.
ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಡಿಸಿಎಫ್ ಕೆ.ಸಿ.ಪ್ರಶಾಂತ್ ಕುಮಾರ್ ಇತರರು ಇದ್ದರು.