ನ್ಯೂಡೆಲ್ಲಿ: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ಆಯ್ಕೆ ಮಾಡಬೇಕಿರುವ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆದರೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿಲ್ಲ.
ಈ ಹಿನ್ನೆಲೆಯಲ್ಲಿ ಶನಿವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ 10 ಜನಪತ್ ನಲ್ಲಿರುವ ಅವರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಡಿ.ಕೆ. ಶಿವಕುಮಾರ್ ಅಭ್ಯರ್ಥಿಗಳ ಪಟ್ಟಿಯನ್ನು ಸೋನಿಯಾ ಗಾಂಧಿ ಅವರಿಗೆ ನೀಡಿದ್ದು ಇಂದು ಸಂಜೆಯೊಳಗೆ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ನಿನ್ನೆ (ನ19) ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿದ್ದರು.
ಹೀಗಾಗಿ ಇಂದು ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದು, ಶಿವಕುಮಾರ್ ಅವರಿಂದ ಅಭ್ಯರ್ಥಿಗಳ ಪಟ್ಟಿ ಪಡೆದಿರುವ ಸೋನಿಯಾ ಗಾಂಧಿ ಅವರು ಉಸ್ತುವಾರಿ ರಣದೀಪ್ ಸುರ್ಜೆವಾಲಾ ಜತೆ ಚರ್ಚೆ ಮಾಡಿ ಬಳಿಕ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸೋನಿಯಾ ಗಾಂಧಿ ಅವರ ಭೇಟಿ ಬಳಿಕ ಮಾತನಾಡಿದ ಡಿಕೆಶಿ, ಸೋನಿಯಾ ಗಾಂಧಿ ಭೇಟಿ ಮಾಡಿ ಹಲವು ವಿಷಯ ಚರ್ಚಿಸಿದ್ದೇನೆ. ವಿಧಾನ ಪರಿಷತ್ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಿದೆ. ರಾಜ್ಯ ಉಸ್ತುವಾರಿ ಜತೆ ಚರ್ಚಿಸಿ ಅಭ್ಯರ್ಥಿಗಳನ್ನು ಪ್ರಕಟಿಸುತ್ತಾರೆ. ಎರಡು ಅಥವಾ ಮೂರು ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಿಗೆ ಒಂದೇ ಬಾರಿ ಅಭ್ಯರ್ಥಿಗಳ ಹೆಸರು ಪ್ರಕಟ ಆಗಲಿದೆ ಎಂದು ಹೇಳಿದರು.
ಇದಲ್ಲದೆ ಎಐಸಿಸಿ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಶುರುವಾಗಿದ್ದು ಆ ಬಗ್ಗೆ ಕೂಡ ಸೋನಿಯಾ ಗಾಂಧಿ ಅವರ ಜತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ಬಗ್ಗೆ ಮತ್ತು ರಾಜ್ಯ ಪ್ರವಾಸ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು. ಆದರೆ ರಾಜ್ಯದಲ್ಲಿ ಈಗ ಭಾರೀ ಚರ್ಚೆ ಆಗುತ್ತಿರುವ ಬಿಟ್ ಕಾಯಿನ್ ಹಗರಣದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.
ಹೈಕಮಾಂಡ್‌ಗೆ ರಾಜ್ಯ ಕಾಂಗ್ರೆಸ್ ನಾಯಕರು ಸಿದ್ದಪಡಿಸಿ ಕಳುಹಿಸಿರುವ ಪಟ್ಟಿ
ಪಟ್ಟಿಯಲ್ಲಿ ಒಂದೇ ಅಭ್ಯರ್ಥಿ ಹೆಸರಿರುವ ಕ್ಷೇತ್ರಗಳು
ಬೆಂಗಳೂರು ಗ್ರಾಮಾಂತರ- ಎಸ್. ರವಿ
ಕೋಲಾರ ಚಿಕ್ಕಬಳ್ಳಾಪುರ- ಗೋವಿಂದೇಗೌಡ
ಶಿವಮೊಗ್ಗ- ಪ್ರಸನ್ನ ಕುಮಾರ್
ಚಿಕ್ಕಮಗಳೂರು- ಗಾಯಿತ್ರಿ ಶಾಂತೇಗೌಡ
ತುಮಕೂರು- ರಾಜೇಂದ್ರ
ಚಿತ್ರದುರ್ಗ ದಾವಣಗೆರೆ- ಸೋಮಶೇಖರ್
ಮಂಡ್ಯ- ದಿನೇಶ್ ಗೂಳಿ ಗೌಡ
ಕೊಡಗು- ಮಂಥರ್ ಗೌಡ
ಹಾಸನ- ಶಂಕರ್ಕೊಪ್ಪಳ -ರಾಯಚೂರು- ಶರಣೇಗೌಡ ಬಯ್ಯಾಪುರ
ಬಳ್ಳಾರಿ- ಕೆಸಿ ಕೊಂಡಯ್ಯ
ಧಾರವಾಡ (ದ್ವಿ ಸದಸ್ಯ ಸ್ಥಾನ) – ಸಲೀಂ ಅಹಮ್ಮದ್
ಬೆಳಗಾವಿ (ದ್ವೀ ಸದಸ್ಯ ಸ್ಥಾನ)- ಚನ್ನರಾಜು
ಗದಗ- ಆರ್ ಎಸ್ ಪಾಟೀಲ್
ಉತ್ತರ ಕನ್ನಡ- ಭೀಮಣ್ಣ ನಾಯಕ
ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿ ಹೆಸರಿರುವ ಕ್ಷೇತ್ರಗಳು
ಮೈಸೂರು- ಚಾಮರಾಜನಗರ (ದ್ವಿ ಸದಸ್ಯ ಸ್ಥಾನ) ಧರ್ಮಸೇನ, ಎಚ್.ಸಿ. ಮಹದೇವಪ್ಪ
ಬೆಂಗಳೂರು ನಗರ- ಮಂಜುನಾಥ್ ರೆಡ್ಡಿ/ಚೇತನ್ ದೇವನಹಳ್ಳಿ
ಕಲಬುರ್ಗಿ- ನೀಲಕಂಠ ರಾವ್ ಮುಲಗಿ/ ಇಟಗಿ ಶಹಪುರ್
ವಿಜಯಪುರ-ಬಾಗಲಕೋಟೆ (ದ್ವಿ ಸದಸ್ಯ ಸ್ಥಾನ)- ಎಸ್.ಆರ್. ಪಾಟೀಲ್, ಸುನೀಲ್ ಗೌಡ ಪಾಟೀಲ್
ದಕ್ಷಿಣ ಕನ್ನಡ- ಉಡುಪಿ(ದ್ವಿ ಸದಸ್ಯ ಸ್ಥಾನ)- ರಾಜೇಂದ್ರ ಕುಮಾರ್, ಮಂಜುನಾಥ್ ಭಂಡಾರಿ, ಶಾಮಲ ಬಂಡಾರಿ, ಐವಾನ್ ಡಿಸೋಜ, ಕೃಪ ಅಳ್ವ