ಮುಂಬೈ: ಸರ್ಕಾರದೊಂದಿಗೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ವಿಲೀನಗೊಳಿಸಬೇಕು ಎಂದು ಆಗ್ರಹಿಸಿ ನೌಕರರು ಮತ್ತು ನೌಕರರ ಪರ ಸಂಘಟನೆಗಳು ಕಳೆದ ಅ.28ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಮುಷ್ಕರಕ್ಕೆ ಮಹಾರಾಷ್ಟ್ರ ಬಿಜೆಪಿ ಮತ್ತು ಎಂಜಿಒಗಳು ಸಾಥ್ ನೀಡುತ್ತಿವೆ.
ಗುರುವಾರ ಪ್ರತಿಭಟನೆಗೆ ಕೆಲವು ರಾಜಕಾರಣಿಗಳು ಸಹ ಆಜಾದ್ ಮೈದಾನದಲ್ಲಿ ಪ್ರತಿಭಟನಾಕಾರರೊಂದಿಗೆ ಸೇರಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಇತ್ತ ಮುಷ್ಕರ ನಿರತ ನೌಕರರಿಗೆ ಎನ್‌ಜಿಒಗಳು ಆಹಾರ ಮತ್ತು ನೀರಿಬ ವ್ಯವಸ್ಥೆ ಕಲ್ಪಿಸಿವೆ.
ಎಂಎಸ್‌ಆರ್‌ಟಿಸಿಯ ಒಟ್ಟು 92,266 ನೌಕರರಲ್ಲಿ 7,541 ನೌಕರರು ಮಾತ್ರ ಗುರುವಾರ ಕೆಲಸ ಪುನರಾರಂಭಿಸಿದ್ದಾರೆ. ಈ ನಡುವೆ ಇನ್ನಷ್ಟು ನೌಕರರನ್ನು ಅಮಾನತುಗೊಳಿಸುವ ಬೆದರಿಕೆಯನ್ನು ಅಧಿಕಾರಿಗಳು ಹಾಕಿದ್ದಾರೆ.
ಆದರೂ ಜಗ್ಗದೆ 84,725 ನೌಕರರು ಇನ್ನೂ ತಮ್ಮ ನಿಲುವಿನಲ್ಲಿ ಅಚಲವಾಗಿದ್ದು, ಪ್ರತಿಭಟನೆ ಮುಂದುವರಿಸಿದ್ದಾರೆ. ಇದನ್ನು ಗಮನಿಸಿದರೆ ನೌಕರರ ಮುಷ್ಕರ ಅಂತ್ಯಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಕೆಲವು ರಾಜಕಾರಣಿಗಳು ಸಹ ಆಜಾದ್ ಮೈದಾನದಲ್ಲಿ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದ್ದಾರೆ.
ಈ ನಡುವೆಯೂ ಗುರುವಾರ ರಾತ್ರಿ 8 ಗಂಟೆಯವರೆಗೆ ಸುಮಾರು 144 ಬಸ್‌ಗಳು ಕಾರ್ಯಾಚರಣೆ ಮಾಡಿದ್ದು, 3,518 ಮಂದಿ ಪ್ರಯಾಣಿಸಿದ್ದಾರೆ. ಈ ಬಸ್‌ಗಳಲ್ಲದೆ ಹೆಚ್ಚಿನ ಇನ್ನೂ 19 ಬಸ್‌ಗಳು ಮುಂಬೈನ ಪರೇಲ್- ಪುಣೆ ನಿಲ್ದಾಣದಿಂದ 433 ಮಂದಿಯನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ತಲುಪಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ 2,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಮಾನತುಗೊಳಿಸಿದ ನಂತರ, ಸಾರಿಗೆ ಸಂಸ್ಥೆಯು ಈ ವಾರ ಮತ್ತೆ 2,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೋಟಿಸ್‌ಗಳನ್ನು ನೀಡಿದ್ದು, ಸಾಧ್ಯವಾದಷ್ಟು ಬೇಗ ಕೆಲಸವನ್ನು ಪುನರಾರಂಭಿಸುವಂತೆ ನಿಗಮ ತಾಕೀತು ಮಾಡಿದೆ.
2,584 ದಿನಗೂಲಿ ಕಾರ್ಮಿಕರಲ್ಲಿ 2,296 ಮಂದಿಗೆ 24 ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಇಲ್ಲದಿದ್ದರೆ ಸೇವೆಯಿಂದ ವಜಾಗೊಳಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮರಳಿ ಕೆಲಸಕ್ಕೆ ಹಾಜರಾದರೆ ಆ ನೌಕರರಿಗೆ ರಕ್ಷಣೆ ನೀಡಲು ಸರ್ಕಾರ ಸಿದ್ಧವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಲ್ಲ 250 ಬಸ್ ಡಿಪೋಗಳಿಗೆ ಬೀಗ ಜಡಿದಿರುವುದರಿಂದ ಖಾಸಗಿ ವಾಹನಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.