ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ವಿಶ್ವಮಾರಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದಾಗಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಸೋಮವಾರಕ್ಕೆ ಅಂತ್ಯವಾಗಲಿದ್ದು, ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಚಾಲನೆ ನೀಡಲಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ-ಬೆಸ ಮಾದರಿಯಲ್ಲಿ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರಲಿದೆ ಎಂದು ಹೇಳಿದ್ದಾರೆ. ಸಂಭಾವ್ಯ ಮೂರನೇ ಅಲೆ ವೇಳೆ ದೆಹಲಿಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 37 ಸಾವಿರಕ್ಕೆ ದಾಖಲಾಗುವ ಕುರಿತು ತಜ್ಞರು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಸರ್ಕಾರ ಕೋವಿಡ್ ನಿಯಮಗಳನ್ನು ಮುಂದುವರಿಸಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.
‘ಅನ್ ಲಾಕ್’ ಯೋಜನೆಗೆ ಪ್ರೋತ್ಸಾಹ ನೀಡುವ ಭಾಗವಾಗಿ ಮುಖ್ಯಮಂತ್ರಿ ಕೇಜ್ರಿವಾಲ್ ನಗರದ ಮಾರುಕಟ್ಟೆಗಳನ್ನು ಸಮ-ಬೆಸ ನಿಯಮದ ಆಧಾರದಲ್ಲಿ ತೆರೆಯಲು ಅನುಮತಿಸಲಾಗುವುದು ಎಂದು ಘೋಷಣೆ ಮಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ನಿವಾರಿಸಲು ಸಮ-ಬೆಸ ನಿಯಮವನ್ನು ಜಾರಿಗೊಳಿಸಲಾಗಿತ್ತು. ಇದೀಗ ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲೂ ಇದೇ ಆಧಾರದ ಮೇಲೆ ಮಾರುಕಟ್ಟೆ ಮತ್ತು ಅಂಗಡಿಗಳನ್ನು ಪ್ರತಿದಿನ ತೆರೆಯಲು ಅನುಮತಿಸಲಾಗುತ್ತದೆ. ಮಾಲ್ ಗಳು ಹಾಗೂ ಶಾಪಿಂಗ್ ಸೆಂಟರ್ ಗಳನ್ನೂ ಕೂಡ ಸಮ-ಬೆಸ ಆಧಾರದಲ್ಲಿ ತೆರೆಯಲ್ಪಡುತ್ತವೆ ಎಂದು ವಿವರಿಸಿದರು.
ಕೊರೊನಾ ವೈರಸ್ ರೂಪಂತರವನ್ನು ಗಮನದಲ್ಲಿಟ್ಟುಕೊಂಡು ದೆಹಲಿಯ ಎಲ್ಎನ್ ಜೆಪಿ ಆಸ್ಪತ್ರೆಯಲ್ಲಿ ಜೆನೋಮ್ ಸೀಕ್ವೆನ್ಸ್ ಲ್ಯಾಬ್ ತೆರೆಯಲು ನಿರ್ಧರಿಸಲಾಗಿದೆ. ಅಂತೆಯೇ ದೆಹಲಿಯಲ್ಲಿ ಕೋವಿಡ್ ಸೋಂಕು ಹೆಚ್ಚಳಕ್ಕೆ ಕಾರಣವಾದ ಅಂಶಗಳ ಅಧ್ಯಯನಕ್ಕೆ ಈ ಲ್ಯಾಬ್ ನೆರವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೆಟ್ರೋದಲ್ಲಿ ಶೇ.50ರಷ್ಟು ಪ್ರಯಾಣಿಕರು
ಇನ್ನು ಸರ್ಕಾರಿ ಸಾರಿಗೆ ಸೇವೆಗಳಿಗೂ ನಿಯಮ ಜಾರಿ ಮಾಡಲಾಗಿದ್ದು, ಪ್ರಮುಖವಾಗಿ ಮೆಟ್ರೋ ರೈಲಿನಲ್ಲಿ ಶೇ.50 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೇವಲ 50 ಪ್ರತಿಶತದಷ್ಟು ಆಸನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂತೆಯೇ ಖಾಸಗಿ ಕಚೇರಿಗಳನ್ನು ಶೇಕಡಾ 50 ರಷ್ಟು ಉದ್ಯೋಗಗಳ ಮಿತಿಯೊಂದಿಗೆ ತೆರೆಯಬಹುದಾಗಿದೆ ಎಂದು ತಿಳಿಸಿದರು.
ಅಗತ್ಯ ವಸ್ತು ಅಂಗಡಿಗಳಿಗೆ ಈ ನಿಯಮವಿಲ್ಲ
ಸಮ-ಬೆಸ ನೀತಿ ಅಗತ್ಯ ವಸ್ತು ಅಂಗಡಿಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಅಗತ್ಯವಸ್ತುಗಳ ಅಂಗಡಿಗಳು ಎಲ್ಲ ದಿನಗಳಲ್ಲಿ ತೆರೆಯಬಹುದು. ಸಮ-ಬೆಸ ನಿಯಮವು ಇದಕ್ಕೆ ಅನ್ವಯಿಸುವುದಿಲ್ಲ. ಪರಿಸ್ಥಿತಿ ಇನ್ನಷ್ಟು ಸುಧಾರಿಸಿದರೆ ಹೆಚ್ಚಿನ ಸಡಿಲಿಕೆ ಘೋಷಿಸಲಾಗುತ್ತದೆ ಎಂದು ಹೇಳಿದರು.