ವಿಜಯಪಥ ಸಮಗ್ರ ಸುದ್ದಿ
ಕೋಲ್ಕತ್ತಾ: ಬಿಜೆಪಿ ಒಂದು ರಾಕ್ಷಸರ ಪಕ್ಷವಾಗಿದೆ. ಅಲ್ಲಿರುವ ಎಲ್ಲರೂ ರಾವಣ, ದುರ್ಯೋಧನ, ದುಶ್ಯಾಸನನಂಥ ರಾಕ್ಷಸರೇ ತುಂಬಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿಗೆ ಹೊಸ ವ್ಯಾಖ್ಯಾನ ನೀಡಿರುವ ಅವರು, ಬಿಜೆಪಿ ಎಂದರೆ ಭಾರತೀಯ (ಜೋಘೊನ್ನೊ)ಕೆಟ್ಟ ಪಕ್ಷ ಎಂದು ದೂಷಿಸಿದ್ದಾರೆ. ಲೋಕಸಭೆಯ ಸಂಸದೆಯಾಗಿ ನಾನು ಏಳು ಬಾರಿ ಆಯ್ಕೆಯಾಗಿದ್ದು, ಅನೇಕ ಪ್ರಧಾನಮಂತ್ರಿಗಳನ್ನು ನೋಡಿದ್ದೇನೆ. ಆದರೆ ಇಂತಹ ನಿರ್ದಯ ಮತ್ತು ಕ್ರೂರ ಪ್ರಧಾನಿಯನ್ನು ಹಿಂದೆ ಎಂದೂ ನೋಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಅಶಾಂತಿ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.
ನನ್ನ ತಲೆ ಮೇಲೆ ಕಾಲಿಟ್ಟು ಫುಟ್ಬಾಲ್ ಆಡುತ್ತಿದ್ದಾರೆ
ಈ ಚುನಾವಣೆ ಹಿನ್ನೆಲೆಯಲ್ಲಿ ಬಂಕುರಾದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಮೋದಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದರು. “ದೀದಿ ಬೆಂಬಲಿತ ಜನರು ಬಂಗಾಳದ ಬೀದಿಗಳಲ್ಲಿ ಗೀಚು ಬರಹವನ್ನು ಬರೆಯುತ್ತಿದ್ದಾರೆ. ಅದರಲ್ಲಿ ಅವರು ನನ್ನ ತಲೆ ಮೇಲೆ ಕಾಲಿಟ್ಟು ಫುಟ್ಬಾಲ್ ಆಡುತ್ತಿದ್ದಾರೆ. ದೀದಿಯವರೇ ನೀವೇಕೆ ಬಂಗಾಳದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅವಮಾನಿಸುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದರು.
ಅಲ್ಲದೇ, ದೀದಿ ಅವರೇ, ನೀವು ಬೇಕಾದರೆ ನನ್ನ ತಲೆ ಮೇಲೆ ಕಾಲಿಟ್ಟು ನನ್ನನ್ನು ಒದೆಯಬಹುದು. ಆದರೆ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿಗಳ ಕನಸುಗಳನ್ನು ಒದೆಯುವುದಕ್ಕೆ ನಾನು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಕಿಡಿ ಕಾರಿದ್ದರು.