ಮುಂಬೈ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ (98) ಅವರು ಇಂದು ಮುಂಜಾನಿ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ದಿಲೀಪ್ ಕುಮಾರ್ ಅವರಿಗೆ ಮುಂಬೈನ ಪಿಡಿ ಹಿಂದುಜ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.
ಡಿಸೆಂಬರ್ 11, 1922ರಲ್ಲಿ ಪೇಶಾವರದಲ್ಲಿ ಜನಿಸಿದ್ದರು. ದಿಲೀಪ್ ಕುಮಾರ್ ಅವರ ಮೂಲ ಹೆಸರು ಮೊಹಮ್ಮದ್ ಯೂಸೂಪ್ ಖಾನ್. ರಾಜ್ ಕಪೂರ್ ಅವರ ಸಮಕಾಲೀನರವರಾಗಿದ್ದರು.
ಬಣ್ಣದ ಲೋಕಕ್ಕೆ ದಿಲೀಪ್ ಕುಮಾರ್ ಹೆಸರಿನಿಂದ ಎಂಟ್ರಿ ಪಡೆದುಕೊಂಡಿದ್ದರು. 22ನೇ ವಯಸ್ಸಿನಲ್ಲಿ ಬಣ್ಣ ಹೆಚ್ಚಿದ ದಿಲೀಪ್ ಕುಮಾರ್ ಅವರ ಮೊದಲ ಚಿತ್ರ ‘ಜ್ವಾರಾ ಭಾಟ’ 1944ರಲ್ಲಿ ತೆರೆಕಂಡಿತ್ತು.
ಐದು ದಶಕದಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಸಂಖ್ಯೆ ಹೆಚ್ಚಾಗೋದು ಮುಖ್ಯ ಅಲ್ಲ. ಚಿತ್ರದ ಕಥೆ ಚೆನ್ನಾಗಿರಬೇಕೆಂದು ಹಲವು ಆಫರ್ ಗಳನ್ನು ದಿಲೀಪ್ ಕುಮಾರ್ ರಿಜೆಕ್ಟ್ ಮಾಡುತ್ತಿದ್ದರು.