ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಬುಧವಾರ ನಡೆದ ಹಠಾತ್ ಬೆಳವಣಿಗೆಯಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಎರಡು ವರ್ಷದ ಹಿಂದೆ 53 ವರ್ಷದ ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಪೊಲೀಸರು ಅವರನ್ನು ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.
ಇಂದು ಬೆಳಗ್ಗೆ ಗೋಸ್ವಾಮಿ ನಿವಾಸಕ್ಕೆ ಹಠಾತ್ ದಾಳಿ ನಡೆಸಿದ ಮುಂಬೈ ಪೊಲೀಸರು ಅವರನ್ನು ಬಂಧಿಸಲು ಯತ್ನಿಸಿದರು. ಈ ವೇಳೆ ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಪೊಲೀಸರು ಯತ್ನಿಸಿದರು. ಅಲ್ಲದೆ ತಮ್ಮ ಪತ್ನಿ, ಪುತ್ರ, ಅತ್ತೆ-ಮಾವಂದಿರ ಮೇಲೂ ಕೂಡ ಹಲ್ಲೆ ನಡೆಸಲು ಯತ್ನಿಸಿದರು ಎಂದು ಅರ್ನಬ್ ಗೋಸ್ವಾಮಿ ಹೇಳಿದ್ದಾರೆ.
ಇನ್ನು ರಿಪಬ್ಲಿಕ್ ಟಿವಿಯಲ್ಲಿ ಬರುತ್ತಿರುವ ವಿಡಿಯೊ ಪ್ರಸಾರದಲ್ಲಿ ಪೊಲೀಸರು ಅರ್ನಬ್ ಗೋಸ್ವಾಮಿ ಮೇಲೆ ಹಲ್ಲೆ ನಡೆಸಿರುವುದು ತಿಳಿಯುತ್ತದೆ. ಇದಾದ ನಂತರ ಪೊಲೀಸ್ ವ್ಯಾನಿನಲ್ಲಿ ಅರ್ನಬ್ ಗೋಸ್ವಾಮಿಯವರನ್ನು ಬಂಧಿಸಿ ಕರೆದುಕೊಂಡು ಹೋಗಲಾಗಿದೆ.
ಪತ್ರಕರ್ತರ ವಿರುದ್ಧ ಹಳೇ ಪ್ರಕರಣಗಳನ್ನು ಕೆದಕಿ ಪತ್ರಕರ್ತ ಶಕ್ತಿಯನ್ನು ಹರಣ ಮಾಡಲು ಕೇಂದ್ರ ಸರ್ಕಾರ ಹೊರಟಿ ಎಂದು ಸಾರ್ವಜನಿಕರು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರುತ್ತಿದ್ದಾರೆ.