ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿದ್ದ ಮುಷ್ಕರ ಇಂದು ಸಂಜೆ ಅಂತ್ಯವಾಗಿದೆ.
ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಲಿಖಿತವಾಗಿ ಅನುಮತಿಸಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆದಿರುವುದಾಗಿ ನೌಕರರ ಸಮ್ಮುಖದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಘೋಷಿಸಿದ್ದಾರೆ.
ಸರ್ಕಾರದಿಂದ ಲಿಖಿತ ಭರವಸೆ ದೊರತಿರುವ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯವಾಗಿದೆ. ಹೀಗಾಗಿ ಇಂದು ರಾತ್ರಿಯಿಂದ ಕರ್ತವ್ಯಕ್ಕೆ ನೌಕರರು ಹಾಜರಾಗಿದ್ದಾರೆ.
ನಮ್ಮ 10 ಬೇಡಿಕೆಗಳ ಪೈಕಿ ಸರ್ಕಾರ 9 ಬೇಡಿಕೆಗಳನ್ನು ಪರಿಷ್ಕರಿಸಿದೆ. ಆದರೆ ನಮ್ಮ ಪ್ರಮುಖ ಬೇಡಿಕೆಯಾಗಿದ್ದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬೇಡಿಕೆ ಮಾತ್ರ ಘೋಷಣೆಯಾಗಿಲ್ಲ. ಇನ್ನು 6ನೇ ವೇತನ ಆಯೋಗದ ಜಾರಿ 2020ರ ಜನವರಿಯಿಂದ ಅನ್ವಯವಾಗಲಿದ್ದು ಮಾರ್ಚ್ 2021ರಿಂದ ವೇತನಕ್ಕೆ ಸೆರಿಸಲಾಗುವುದು ಎಂದು ಎಂದರು.
ಇನ್ನು ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗದಿದ್ದರೆ ಮತ್ತೆ ಮೂರು ತಿಂಗಳ ಬಳಿಕ ಪ್ರತಿಭಟನೆ ಮಾಡುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.