ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಗುರುವಾರ (ನ.19) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರಧಾನಮಂತ್ರಿಗಳಿಗೆ ಪತ್ರ ಚಳವಳಿ ಹಮ್ಮಿಕೊಂಡಿತು.
ಪತ್ರ ಚಳವಳಿಯಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಈಶಾನ್ಯ, ವಾಯುವ್ಯ ಸಾರಿಗೆ ನಿಗಮಗಳ ನೌಕರರು ಭಾಗವಹಿಸಿ ನಮ್ಮನ್ನು ಸರ್ಕಾರಿ ನೌಕರರು ಎಂದು ಘೋಷಿಸುವಂತೆ ಆಗ್ರಹಿಸಿದರು.
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಮತ್ತು ನಿಗಮ-ಮಂಡಳಿಗಳ ನೌಕರರು ಕೊರೊನಾದ ತುರ್ತುಪರಿಸ್ಥಿತಿ ಸಮಯದಲ್ಲಿ ಸಕಾಲದಲ್ಲಿ ಸರ್ಕಾರಿ ವೇತನದ ಜತೆಗೆ ಸರ್ಕಾರದ ಹಲವು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ನಮಗೆ ಮಾತ್ರ ಸೌಲಭ್ಯ ನೀಡುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ನಾವು ಬೇರೆ ದಾರಿ ಕಾಣದೆ ಪ್ರತಿಭಟನೆಯ ಹಾದಿ ತುಳಿಯಬೇಕಿದೆ ಎಂದು ಹೇಳಿದರು.
ಬೆಳಗ್ಗೆ 6 ಗಂಟೆಗೆ ಡಿಪೋಗಳಿಗೆ ಹೋಗಬೇಕು. ರಾತ್ರಿ 8-9ಗಂಟೆಗೆ ಮನೆ ಸೇರಬೇಕು. ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾವು ಯಾರಿಗೂ ಹೇಳಿಕೊಳ್ಳಲಾದ ಯಾತನೆಯನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ಎಲ್ಲಾ ನೌಕರರು ಒಗ್ಗಟ್ಟಾಗಿ ಹೋರಾಟಕ್ಕೆ ಕೈ ಜೋಡಿಸಿ ನಮ್ಮ ನಮ್ಮ ಹಕ್ಕುಗಳನ್ನು ಪಡೆಯೋಣ ಎಂದು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಕರೆ ನೀಡಿದರು.
ನಾವು ಇಂದು ಪತ್ರ ಚಳವಳಿಯನ್ನಷ್ಟೇ ಮಾಡುತ್ತಿದ್ದೇವೆ ನಮ್ಮ ಬೇಟಿಕಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಡೇರಿಸದಿದ್ದರೆ ಡಿಸೆಂಬರ್ ಮೊದಲ ವಾರದಿಂದ ನಾಲ್ಕು ನಿಗಮಗಳ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಕ್ಟೋಬರ್ ತಿಂಗಳ ವೇತನ ಇನ್ನೂ ನಮ್ಮ ಖಾತೆಗಳಿಗೆ ಬಂದಿಲ್ಲ. ಈ ನವೆಂಬರ್‌ನಲ್ಲಿ ದೀಪಾಳಿ ಹಬ್ಬ ಬಂದು ಹೋಗಿದೆ ಆದರೆ ನಮ್ಮ ಮನೆಗಳಲ್ಲಿ ಹೋಳಿಗೆಯ ಸಂಭ್ರಮವಿಲ್ಲ. ನಮ್ಮ ಮಕ್ಕಳು ತಂದೆ ತಾಯಿಯಂದಿರು ಈ ಬಾರಿ ಹಬ್ಬ ಆಚರಣೆ ಮಾಡಲಾಗಲಿಲ್ಲವಲ್ಲ ಎಂದು ಕಣ್ಣೀರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲೂ ನಾವು ಸೇವೆಯನ್ನು ನಿಲ್ಲಿಸಿಲ್ಲ ಪ್ರತಿಯೊಬ್ಬ ನೌಕರರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದೇವೆ ಎಂದು ತಮ್ಮ ದುಃಖವನ್ನು ತೋಡಿಕೊಂಡರು.
ಇನ್ನು ನಾವು ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಅದಕ್ಕೆ ಕಿವಿಯೂ ಇಲ್ಲ ಕಣ್ಣು ಕಾಣುವುದಿಲ್ಲ ಹೀಗಾಗಿ ನಾವು ಉಗ್ರಹೋರಾಟಕ್ಕೆ ದುಮುಕುವುದು ಅನಿವಾರ್ಯವಾಗಿದೆ ಎಂದು ದುಃಖದಿಲ್ಲೇ ಹೇಳಿ, ಮುಂದಿನದಿಗಳಲ್ಲಿ ಸಂಚಾರ ವ್ಯತ್ಯಯವಾಗಿ ನಿಮಗೆ ತೊಂದರೆ ಆದರೆ ನಾವು ಈಗಲೇ ಕ್ಷೇಮೆ ಕೇಳುತ್ತೇವೆ. ನಮ್ಮ ನ್ಯಾಯ ಸಮ್ಮತ ಬೇಡಿಕೆ ಈಡೇರಿಕೆಗೆ ನೀವು ಸಹಕರಿಸಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದರು.
ಚಳವಳಿಯಲ್ಲಿ ಹಸಿರು ಸೇವೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಹಿಂದೂ ಜಾಗ್ರತಿ ಸೇನೆಯ ಡಾ.ವಿನಯ್ ಗೌಡ, ಕರಾನೌಸಂ ಪ್ರಧಾನ ಕಾರ್ಯದರ್ಶಿ ನಾಗಣ್ಣಗೌಡ, ಬೆಂಗಳೂರು ನಗರ ಕಸಾಪ ಅಧ್ಯಕ್ಷ ಮಾಯಣ್ಣ ಭಾಹವಹಿಸಿ ಬೆಂಬಲ ಸೂಚಿಸಿದರು. ನೌಕರರ ಕೂಟದ ಪದಾಧಿಕಾರಿ ಸುಧಾಕರ್ ರೆಡ್ಡಿ ಸೇರಿ ಸಾವಿರಾರು ನೌಕರರು ಭಾಗವಹಿಸಿದ್ದರು.