ಮಲೈ ಮಹದೇಶ್ವರ ಬೆಟ್ಟ: ಇಂದಿನಿಂದ ವಾರದ ಎಲ್ಲ ದಿನಗಳೂ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲಯವು ಭಕ್ತಾದಿಗಳಿಗೆ ತೆರೆದಿರುತ್ತದೆ ಎಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.
ಭಾನುವಾರ ಸಂಜೆ 7ರವರೆಗೆ ತೆರೆಯಲಿದ್ದು, ಸೋಮವಾರದಿಂದ ಬೆಳಗ್ಗೆ 4 ರಿಂದ ರಾತ್ರಿ 10ರವರೆಗೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸಂಜೆ 5ರಿಂದ ಪ್ರಾಯೋಗಿಕವಾಗಿ ನಾಗಮಲೈ ಭವನದಲ್ಲಿ ಮಾತ್ರ ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಭಕ್ತಾದಿಗಳಿಗೆ ರಾತ್ರಿ ತಂಗಲು ಕೊಠಡಿಗಳನ್ನು ನೀಡಲಾಗುವುದು.
ದರ: ಎ.ಸಿ. ಕೊಠಡಿ – 950 ರೂ. ನಾನ್ ಎ.ಸಿ. – 500 ರೂ.
ದಾಸೋಹದಲ್ಲಿ ಬೆಳಗ್ಗೆ 7 ರಿಂದ ರಾತ್ರಿ 9ರವರೆಗೆ ಉಪಾಹಾರ ಪ್ರಸಾದ ವಿತರಣೆ ವ್ಯವಸ್ಥೆ ಇದೆ. ನಿಧಾನವಾಗಿ ಬಸ್‌ಗಳೂ ಚಲಿಸಲಾರಂಭಿಸಬಹುದು. ಸದ್ಯ ಸ್ವಂತ ವಾಹನಗಳಲ್ಲಿ ಭಕ್ತರು ಬರಬಹುದು ಎಂದು ತಿಳಿಸಿದ್ದಾರೆ.
ಏನೇನು ಇರಲಿದೆ ಇರಲ್ಲ
- ಉತ್ಸವಗಳು ಇರುವುದಿಲ್ಲ.
- ಮಾಸ್ಕ್ ಧರಿಸಿಯೇ ಬರಬೇಕು.
- ಪ್ಲಾಸ್ಟಿಕ್ ಬಾಟಲ್ ತರಬಾರದು.
- ಸಾಮಾಜಿಕ ಅಂತರ ಕಾಪಾಡಿಕೊಂಡು ದರ್ಶನ ಪಡೆಯಬಹುದು.
- ಪೂಜೆ ಮಾಡಿಸಬಹುದು.
- ಸೋಮವಾರದಿಂದ ಬೆಳಿಗ್ಗೆ 4 ಕ್ಕೆ, ಬೆಳಿಗ್ಗೆ 10.30ಕ್ಕೆ, ಸಂಜೆ 6ಕ್ಕೆ ಅಭಿಷೇಕ ನಡೆಯಲಿದ್ದು ಅಭಿಷೇಕ ಮಾಡಿಸುವವರು ಮಾಡಿಸಬಹುದು ಆದರೆ ದೇವಾಲಯದ ಒಳಗಡೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ.
- ಲಾಡು ಪ್ರಸಾದ ಮತ್ತು ಮಿಶ್ರ ಪ್ರಸಾದ ಮಾರಾಟ ವ್ಯವಸ್ಥೆ ಇದೆ.
- ಎಲ್ಲೆಡೆ ಶುದ್ಧಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸಲಿವೆ. ಅದರ ಸದುಪಯೋಗ ಪಡೆದು ಪ್ರಾಧಿಕಾರದ ಆವರಣವನ್ನು ಸ್ವಚ್ಛವಾಗಿ ಇಡಲು ಭಕ್ತಾದಿಗಳು ಸಹಕರಿಸಲು ಕೋರಿದೆ.
ಯಾವುದೇ ಸಂದೇಹಗಳಿದ್ದಲ್ಲಿ ದೇವಾಲಯದ ಪಾರುಪತ್ತೇಗಾರ ಮಹದೇವ ಸ್ವಾಮಿ ಅವರನ್ನು ( +919449490095 ) ಸಂಪರ್ಕಿಸಬಹುದು.