ದಾವಣಗೆರೆ: ಜಮೀರ್ ಅಹ್ಮದ್ ಒಬ್ಬ ಗುಜರಿ, ಚಿಲ್ಲರೆ ಗಿರಾಕಿ. ಅವನು ಏನೇ ಗಳಿಸಿದ್ರು ಅದು ಅನೈತಿಕ ಚಟುವಟಿಕೆಗಳಿಂದಲೇ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ.
ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಮೀರ್ ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಅವರ ಮನೆ ಮುಂದೆ ಖಾಕಿ ಬಟ್ಟೆ ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದು ವಾಚ್‌ಮನ್ ಆಗಿ ಕೆಲಸಮಾಡುತ್ತೇನೆ ಎಂದು ಹೇಳಿದ್ದರು. ಆದ್ರೆ ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಜಮೀರ್ ವಾಚ್‌ಮನ್ ಆಗಲಿಲ್ಲ. ಇನ್ನು ಸರ್ಕಾರಕ್ಕೆ ತಮ್ಮ ಆಸ್ತಿ ಬರೆದುಕೊಡುವ ಮಾತು ಎಲ್ಲಿಂದ ಬಂದಿತು. ಅವರು ಒಂದುರೀತಿಯ ಸುಳ್ಳುಗಾರ ಜತೆಗೆ ಎರಡು ನಾಲಿಗೆ ವ್ಯಕ್ತಿ ಎಂದು ವ್ಯಂಗ್ಯವಾಡಿದರು.
ಡ್ರಗ್ಸ್ ಸಂಬಂಧ ಮಾತನಾಡಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ನಟಿ ನಟರು, ರಾಜಕೀಯ ವ್ಯಕ್ತಿಗಳ ಮಕ್ಕಳು, ಉದ್ಯಮಿಗಳ ಮಕ್ಕಳು ಯಾರೆ ಆದರೂ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಪೊಲೀಸರು ನಡೆಸುವ ತನಿಖೆಗೆ ಮುಕ್ತ ಅವಕಾಶ ನೀಡಿದೆ. ಹೀಗಾಗಿ ಡ್ರಗ್ಸ್ ವಿಚಾರದಲ್ಲಿ ಸತ್ಯಾಂಶ ಹೊರ ಬರಲಿದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯ ಭೇಟಿ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಯಾವುದೇ ರಾಜಕೀಯ ಉದ್ದೇಶದಿಂದ ಭೇಟಿಯಾಗಿಲ್ಲ, ಅಭಿವೃದ್ಧಿ ವಿಷಯವಾಗಿ ಚರ್ಚಿಸಲು ಭೇಟಿಯಾಗಿದ್ದು, ಈ ಹಿಂದೆ ನಾನು ಕೂಡ ಕಾವೇರಿ ಭವನದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೆ. ಇನ್ನು ಸಿಎಂ ಅವರನ್ನು ರಾಜಕೀಯ ಮಾಡಲು ಅವರು ಭೇಟಿಯಾಗಿದ್ದಲ್ಲ ರಾಜ್ಯ ಮತ್ತು ಕ್ಷೇತ್ರಗಳ ಅಭಿವೃದ್ಧಿ ಸಂಬಂಧ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲು ಬಂದಿದ್ದರಷ್ಟೇ ಎಂದು ಹೇಳಿದರು.