ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಅವರ ಸಾವಿಗೆ ನ್ಯಾಯ ಸಿಗುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಜಿಲ್ಲೆಯ ಎಲ್ಲಾ ವೈದ್ಯರು ನಿರ್ಧಸಿರುವುದರಿಂದ ಇಂದು ಕೋವಿಡ್ ಪರೀಕ್ಷೆ ನಡೆದಿಲ್ಲ.
ಹೀಗಾಗಿ ಶನಿವಾರವೂ ಕೂಡ ಕೊರೊನಾ ಮಹಾಮಾರಿ ಬಗ್ಗೆ ಜಿಲ್ಲೆಯ ಮಟ್ಟಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇದು ಅಲ್ಲದೆ ಟಿಎಚ್‌ಒ ಡಾ. ನಾಗೇಂದ್ರ ಅವರ ಸಾವಿಗೆ ಕಾರಣವಾಗಿರುವ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವವರೆಗೆ ಮತ್ತು ಇರುವ ವೈದ್ಯರು, ವೈದ್ಯೇತರ ಕೋವಿಡ್ ವಾರಿಯರ್ಸ್‌ಗಳಿಗೆ ಯಾವುದೇ ಕಿರುಕುಳ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಶನಿವಾರ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಯಾವುದೇ ಸ್ಥಳ ನಿಗದಿ ಮಾಡದೇ ಸರ್ಕಾರ ವರ್ಗಾವಣೆ ಮಾಡಿದೆ. ಆದರೆ ಪ್ರತಿಭಟನಾ ನಿರತ ವೈದ್ಯರು ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಎರಡನೇ ದಿನವೂ ಕೊರೊನಾ ಸಂಬಂಧಿತ ಎಲ್ಲಾ ಪರೀಕ್ಷೆಗಳನ್ನು ಬದಿಗೊತ್ತಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ವೈದ್ಯರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುತ್ತೇವೆ ನೀವು ಕರ್ತವ್ಯಕ್ಕೆ ಹಾಜರಾಗಿ ಎಂದು ಮನವಿ ಮಾಡಿದ್ದಾರೆ. ಆದರೆ ಅವರ ಮನವಿಗೆ ಧರಣಿ ನಿರತ ವೈದ್ಯರು ಸ್ಪಂದಿಸಿಲ್ಲ.