ನ್ಯೂಡೆಲ್ಲಿ: ಸರ್ಕಾರ ತಮ್ಮ ಕೆಲ ‘ವಿಶೇಷ’ ಸ್ನೇಹಿತರ ಜೇಬು ತುಂಬಿಸುವಲ್ಲಿ ನಿರತವಾಗಿರುವುದರಿಂದ ದೇಶದ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 94ನೇ ಸ್ಥಾನ ಪಡೆದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಹಸಿವಿನಲ್ಲಿ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿದೆ ಎಂದರೆ ನಮ್ಮ ದೇಶದ ಜನರ ಸ್ಥಿತಿ ಹೇಗಿದೆ ಎಂಬುದನ್ನು ಊಹಿಸಿಕೊಂಡರೇ ಭಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ನಮ್ಮ ದೇಶಕ್ಕಿಂತಲೂ ಆರ್ಥಿಕವಾಗಿ ಹಿಂದುಳಿದಿರುವ ಪಾಕಿಸ್ತಾನ(88) ಮತ್ತು ಬಾಂಗ್ಲಾದೇಶ (75) ಗಿಂತಲೂ ಕೆಳಗಿರುವ ಗ್ರಾಫಿಕ್ಸ್ ಅನ್ನು ರಾಹುಲ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಇದರ ಪ್ರಕಾರ ಕೇವಲ 13 ದೇಶಗಳು ಮಾತ್ರ ಭಾರತದಿಂದ ಕೆಳಗಿವೆ. ಇದು ರವಾಂಡ, ನೈಜೀರಿಯಾ, ಅಫ್ಗಾನಿಸ್ತಾನ ಮತ್ತು ಲಿಬಿಯಾಗಳನ್ನು ಒಳಗೊಂಡಿವೆ. ಕಳೆದ ವರ್ಷ 102ರಷ್ಟಿದ್ದ ಶ್ರೇಣಿ ಈ ವರ್ಷ 94ಕ್ಕೆ ಏರಿಕೆಯಾಗಿದೆ. ವಿಶ್ವದಾದ್ಯಂತ ಹಸಿವಿನ ಮಟ್ಟ ಮತ್ತು ಅಪೌಷ್ಟಿಕತೆಯನ್ನು ಲೆಕ್ಕಹಾಕುವ ಸೂಚ್ಯಂಕವನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.
107 ದೇಶಗಳ ಪಟ್ಟಿಯಲ್ಲಿ ಭಾರತದ ಒಟ್ಟಾರೆ ಮೊತ್ತ 27.2 ಆಗಿದೆ. ಇದು ಭಾರತವನ್ನು ಗಂಭೀರ ವಿಭಾಗದಲ್ಲಿರಿಸುತ್ತದೆ. ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ.14ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇನ್ನಾದರೂ ಕೇಂದ್ರ ಸರ್ಕಾರ ಇದರತ್ತ ಹೆಚ್ಚಿನ ಗಮನಕೊಡಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
Gamananu illa gamyanu illa