ಬೆಂಗಳೂರು: ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಅಕ್ಟೋಬರ್8ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಹಾಸನ, ಅರಸಿಕೆರೆ, ಕೊಪ್ಪಳ, ಶಿಡ್ಲಘಟ್ಟ, ಹರಿಹರ ನಗರಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪುರಸಭೆ, ಕೊಡಗು ಜಿಲ್ಲೆ ಸೋಮವಾರಪೇಟೆ ಪಪಂ ಸೇರಿ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕಿಷಿಗಳು ಸಲ್ಲಿಸಿದ ಅರ್ಜಿಗಳನ್ನು ಗುರುವಾರ ಮಾನ್ಯ ಮಾಡಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಈ ಅದೇಶ ನೀಡಿದೆ.
ಹೈಕೋರ್ಟ್ ನ ಏಕಸದಸ್ಯ ಪೀಠ ಇಂದು ಆದೇಶ ಹೊರಡಿಸಿದ್ದು, ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಹತ್ತು ದಿನಗಳ ಅವಕಾಶವನ್ನು ನೀಡಿದೆ.
ರಾಜ್ಯದ ಒಟ್ಟು 277 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ಮೀಸಲಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಬಹಳಷ್ಟು ಕಡೆ ಚುನಾವಣೆ ನಡೆದು ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ಆಗಿ ಫಲಿತಾಂಶ ಪ್ರಕಟವಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಆದರೆ ಈ ಆದೇಶದಿಂದ ಈ ಚುನಾವಣಾ ಫಲಿತಾಂಶಗಳು ಅಮಾನತು ಸ್ಥಿತಿಯಲ್ಲಿರಲಿವೆ.