- ವಿಜಯಪಥ ಸಮಗ್ರ ಸುದ್ದಿ
ಶಿವಮೊಗ್ಗ: ರಾಜ್ಯದಲ್ಲಿ 2023ಕ್ಕೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದು ನಮ್ಮ ಗುರಿ. ಹೀಗಾಗಿ ಗುರಿ ಇಟ್ಟು ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಬಿಜೆಪಿ ವಿಶೇಷ ಸಭೆಯಲ್ಲಿ ಮಾತನಾಡಿಸ ಅವರು, ಹಿರಿಯ ಧುರೀಣರಾದ ಜಗನ್ನಾಥರಾವ್ ಜೋಶಿ, ಬಾಬುರಾವ್ ದೇಶಪಾಂಡೆ ಮೊದಲಾದವರ ಪರಿಶ್ರಮದಿಂದ ಬಿಜೆಪಿ ಇಂದು ಅಧಿಕಾರಕ್ಕೇರಿದೆ. ಕಳೆದ 35-40 ವರ್ಷಗಳಿಂದ ಪಟ್ಟ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಕಾರ್ಯಕರ್ತರಲ್ಲಿ ತೃಪ್ತಿ ತಂದಿದೆ. ಇನ್ನು ಮುಂಬರುವ ದಿನಗಳಲ್ಲಿ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದಲ್ಲದೆ ವಿಧಾನಸಭೆ ಚುನಾವಣೆಯಲ್ಲಿ ಸಹ 150 ಸ್ಥಾನ ಗಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಬೆಂಬಲಿತ ವ್ಯಕ್ತಿಗಳು ಸಹಸ್ರ ಸಂಖ್ಯೆಯಲ್ಲಿ ಗೆದ್ದಿದ್ದಾರೆ, ಅವರಲ್ಲಿ ಹಲವರು ಪಂಚಾಯಿತಿ ಅಧ್ಯಕ್ಷರಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಕನಸಾಗಿದ್ದ ಗೋಹತ್ಯೆ ನಿಷೇಧ ಕಾನೂನು ಜಾರಿ ಅಂತಿಮ ಹಂತದಲ್ಲಿದೆ. “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020” ಕಾಯ್ದೆಯನ್ನು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತಿದೆ. ಈ ಮೂಲಕ ಅನೇಕ ಸಂಘಟಕರ ಉದ್ದೇಶ ಈಡೇರಿದೆ ಎಂದು ಹೇಳಿದರು.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿಟಿ ರವಿ, ಕೇಂದ್ರ ಸಚಿವರಾದ ಡಿವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಪದಾಧಿಕಾರಿಗಳು ಇದ್ದರು.