ಬೆಂಗಳೂರು: ಸಮಾಜದ್ರೋಹಿ ಶಕ್ತಿಗಳನ್ನು ಮಟ್ಟ ಹಾಕಲು ರಾಜ್ಯ ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಪೊಲೀಸ್ ಸಂಸ್ಮರಣ ದಿನಾಚರಣೆ ಅಂಗವಾಗಿ ಬುಧವಾರ (ಅ.21) ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿ, ಸದೃಢ ಸಮಾಜಕ್ಕಾಗಿ ಸದಾ ದುಡಿಯುವ ನಮ್ಮ ಪೊಲೀಸರ ಕರ್ತವ್ಯನಿಷ್ಠೆ, ತ್ಯಾಗ ಮತ್ತು ಸೇವೆಗಳಿಗೆ ಹಾಗೂ ಅವರ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕೊರೊನಾ ಸೋಂಕು ನಿಯಂತ್ರಣ ಮತ್ತು ಲಾಕ್‌ಡೌನ್ ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವಲ್ಲಿನ ಪೊಲೀಸರ ಶ್ರಮ ಶ್ಲಾಘನೀಯವಾದುದು. ಕರ್ತವ್ಯದಲ್ಲಿದ್ದಾಗ ದೇಶಾದ್ಯಂತ ಒಟ್ಟಾರೆ 264 ಪೊಲೀಸರು ಹುತಾತ್ಮರಾಗಿದ್ದಾರೆ. ಈ ಎಲ್ಲಾ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.
ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದು ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಕರ್ತವ್ಯನಿರತರಾಗಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಗೌರವನಮನ ಸಲ್ಲಿಸಲಾಯಿತು. ಸದೃಢ ಸಮಾಜಕ್ಕಾಗಿ ಸದಾ ದುಡಿಯುವ ನಮ್ಮ ಪೊಲೀಸರ ಕರ್ತವ್ಯನಿಷ್ಠೆ, ತ್ಯಾಗ ಮತ್ತು ಸೇವೆಗಳಿಗೆ ಹಾಗೂ ಅವರ ಕುಟುಂಬಗಳಿಗೆ ಕೃತಜ್ಞತೆ ವ್ಯಕ್ತಪಡಿಸಲಾಯಿತು. ಗೃಹಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/IWZOOvIOZ7
— B.S. Yediyurappa (@BSYBJP) October 21, 2020