ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಏಷ್ಯಾದ ಅತಿದೊಡ್ಡ ಕೋಳಿ ಮಾರುಕಟ್ಟೆಯಾದ ಗಾಜಿಪುರದಲ್ಲಿ 100 ಕೋಳಿಗಳ ಮಾದರಿ ಕಲೆಯಾಕಿ ಪರೀಕ್ಷೆಗೊಳಪಡಿಸಿದ್ದು, ಹಕ್ಕಿ ಜ್ವರ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನಲೆ ಕೋಳಿ ಮಾಂಸ ಮಾರಾಟದ ಮೇಲೆ ಹೇರಲಾಗಿದ್ದ ತಾತ್ಕಲಿಕ ನಿಷೇಧವನ್ನು ದೆಹಲಿ ಸರ್ಕಾರ ಹಿಂಪಡೆದಿದೆ.
ಈ ಮೂಲಕ ದೆಹಲಿಯಲ್ಲಿ ಆತಂಕ ಮೂಡಿಸಿದ್ದ ಹಕ್ಕಿ ಜ್ವರ ಕೋಳಿಗಳಲ್ಲಿ ಕಂಡು ಬಂದಿಲ್ಲ ಎಂಬುವುದು ಮಾರಾಟಗಾರರು ಮತ್ತು ಸಾಕಾಣಿಕೆಗಾರರಲ್ಲಿ ಸಂತಸ ಮೂಡಿಸಿದೆ.
ನಿನ್ನೆ ಸತ್ತ ಕಾಗೆ ಹಾಗೂ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ದೆಹಲಿಯ ಕೆಲ ಆಯ್ದ ಪ್ರದೇಶಗಳಲ್ಲಿ ಕೋಳಿ ಮಾಂಸ ಮಾರಾಟ, ಸಾಗಾಟಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲದೇ ಹೋಟೆಲ್, ರೆಸ್ಟೋರೆಂಟ್ಗಳಲ್ಲಿಯೂ ಕೋಳಿ ಮತ್ತು ಮೊಟ್ಟೆ ಆಹಾರವನ್ನು ಸರಬರಾಜು ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು. ಈ ಆದೇಶ ನೀಡಿದ ದಿನದೊಳಗೆ ಕೋಳಿಗಳಲ್ಲಿ ಹಕ್ಕಿಜ್ವರ ಇರುವ ಬಗ್ಗೆ ವರದಿ ನಕರಾತ್ಮಕವಾಗಿದ ಹಿನ್ನೆಲೆ ಈ ಆದೇಶ ಹಿಂಪಡೆಯಲಾಗಿದೆ ಎಂದ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೋಳಿ ಘಟಕಗಳಿಂದ ಮಾದರಿಗಳನ್ನು ಕೊಂಡೊಯ್ಯಲಾಗಿದೆ, ಈ ವೇಳೆ ವರದಿ ನೆಗೆಟಿವ್ ಬಂದಿದ್ದು, ಈ ಹಿನ್ನೆಲೆ ಸಂಸ್ಕರಿಸಿದ ಕೋಳಿಗಳ ಮಾರಾಟದ ಮೇಲೆ ವಿಧಿಸಲಾಗಿದ್ದ ನಿರ್ಬಂಧ ತೆಗೆದು ಹಾಕುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವಾರ ಸಂಜಯ್ ಸರೋವರದಲ್ಲಿ ಅನೇಕ ಬಾತುಕೋಳಿಗಳು ಹಾಗೂ ವಿವಿಧ ಉದ್ಯಾನವನಗಳಲ್ಲಿ ಕಾಗೆಗಳು ಮೃತಪಟ್ಟಿದ್ದವು. ಈ ಸಾವನ್ನಪ್ಪಿದ ಹಕ್ಕಿಗಳ ಮಾದರಿಗಳನ್ನು ಅಧ್ಯಯನ ನಡೆಸಿದಾಗ ಅವುಗಳಲ್ಲಿ ಹಕ್ಕಿ ಜ್ವರ ಇರುವುದು ಪತ್ತೆಯಾಗಿತ್ತು.
ಹೀಗಾಗಿ ಉತ್ತರ ಪ್ರದೇಶ ಗಡಿಗಯಲ್ಲಿರುವ ಗಾಜಿಪುರ ಮಾರುಕಟ್ಟೆ, ಕೋಳಿ, ಬಾತುಕೋಳಿ, ಮೊಟ್ಟೆ ಗಳ ಪೂರೈಕೆ ಮಾಡುವ ಪ್ರಮುಖ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯುಂದ 104 ಮಾದರಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 100 ಕೋಳಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು ಎಂದು ಪಶುಸಂಗೋಪನಾ ಅಧಿಕಾರಿ ರಾಕೇಶ್ ಸಿಂಗ್ ತಿಳಿಸಿದ್ದಾರೆ.
ಇನ್ನು ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಗುಜರಾತ್, ಹರ್ಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಈಗಾಗಲೇ ಹಕ್ಕಿ ಜ್ವರದ ಪ್ರಕರಣಗಳು ದಾಖಲಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರವಹಿಸಿದೆ. ಇನ್ನು ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಅಷ್ಟಾಗಿ ವರದಿಯಾಗಿಲ್ಲ.