ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನೆಲೆಯಲ್ಲಿ ನಾಳೆ (ಜ.24) ನಡೆಯಬೇಕಿದ್ದ KPSC / FDA ಪರೀಕ್ಷೆಯನ್ನು ದಿಢೀರನೆ ಮುಂದೂಡಲಾಗಿದೆ.
2019 ರಿಂದ ಬಾಕಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಕೆಪಿಎಸ್ಸಿ ನಾಳೆ ಪರೀಕ್ಷೆ ನಡೆಯಬೇಕಿತ್ತು. ಇನ್ನು ಇರುವ 1114 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಬರೋಬ್ಬರಿ 3.74 ಲಕ್ಷ ಯುವಜನರು ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸತ್ಯವತಿ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಮುಂದಿನ ದಿನಗಳಲ್ಲಿ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದ್ದಾರೆ. ಪೆರೀಕ್ಷೆಗೂ ಮುನ್ನವೇ ಸೋರಿಕೆಯಾಗಿ ಪರೀಕ್ಷೆಯನ್ನು ಮುಂದೂಡಿದ್ದಾರೆ. ಆದರೆ ಇದರಿಂದಾಗಿ ಕಷ್ಟಪಟ್ಟು ಸಿದ್ದತೆ ಮಾಡಿಕೊಂಡಿದ್ದ ಪ್ರತಿಭಾವಂತರ ಪಾಡೇನಾಗಬೇಕು. ಇನ್ನು ವಯೋಮಿತಿ ಮೀರಿದವರಿಗೆ ಇದರಿಂದ ಅನ್ಯಾಯವಾಗುವುದಿಲ್ಲವೆ.
ಸರ್ಕಾರ ಮತ್ತು ಅಧಿಕಾರಿಗಳು ಯುವಜನರು ಅರ್ಜಿ ಸ್ವೀಕರಿಸುವ ಜತೆಗೆ ಅರ್ಜಿ ಶುಲ್ಕವನ್ನು ಪಡೆದುಕೊಂಡಿದ್ದು, ಈಗ ಈ ರೀತಿ ಚೆಲ್ಲಾಟವಾಡುವುದು ಎಷ್ಟು ಸರಿ ಎಂದು ನೊಂದ ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ಇನ್ನು ಎರಡು ವರ್ಷದ ಹಿಂದೆಯೇ ನೇಮಕಾತಿಗಾಗಿ ಈ ಅಧಿಸೂಚನೆ ಹೊರಡಿಸಲಾಗಿತ್ತು. ಕೆಪಿಎಸ್ಸಿ ಮತ್ತು ಅದರ ಸುತ್ತಲಿನ ಹುಳುಗಳಿಂದಾಗಿ ರಾಜ್ಯದ ಯುವಕರಿಗೆ ಸರ್ಕಾರಿ ನೌಕರಿ ಗಗನ ಕುಸುಮವಾಗಿರುವುದು ದುರಂತ. ಯುವಜನರ ಓದು, ಪರಿಶ್ರಮಕ್ಕೆ ಬೆಲೆ ಸಿಗಲು ಸರ್ಕಾರ ಕಠಿಣ ನಿರ್ಧಾರ ತಳೆಯಬೇಕಿದೆ ಎಂದು ಹಲವರು ಆಗ್ರಹಿಸಿದ್ದಾರೆ.