ಬೆಂಗಳೂರು: ರಾಜ್ಯ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
ವಸತಿ ಸಮುಚ್ಛಯಗಳ ನಿರ್ಮಾಣದ ಹೆಸರಿನಲ್ಲಿ ಅಂದಾಜು 666 ಕೋಟಿ ರೂ. ಗೋಲ್ಮಾಲ್ ನಡೆದಿದೆ. ಗುತ್ತಿಗೆದಾರನಿಂದ ಮುಖ್ಯಮಂತ್ರಿ ಕುಟುಂಬಕ್ಕೆ ಹಣ ವರ್ಗಾವಣೆಯಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಆಪಾದಿಸಿದ್ದಾರೆ.
ಈ ಅವ್ಯವಹಾರದಲ್ಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮತ್ತು ಅಳಿಯ ಶಾಮೀಲಾಗಿದ್ದಾರೆ. ಹೀಗಾಗಿ ಸಿಎಂ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹಣ ವರ್ಗಾವಣೆ ಸಂಬಂಧ ಗುತ್ತಿಗೆದಾರರ ಜತೆ ವಿಜಯೇಂದ್ರ ಮಾತನಾಡಿರುವ ಆಡಿಯೋ ತುಣುಕು ಲಭ್ಯವಿದೆ ಎಂದು ಸುರ್ಜೆವಾಲ ಹೇಳಿದರು.
ಮುಖ್ಯಮಂತ್ರಿಗೆ ತಿಳಿಯದೇ ಈ ಅವ್ಯವಹಾರ ನಡೆಯಲು ಸಾಧ್ಯವಿಲ್ಲ ಹೀಗಾಗಿ ಅಧಿಕಾರದಲ್ಲಿ ಮುಂದುವರಿಯಲು ಸಿಎಂಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಸುರ್ಜೆವಾಲ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು.
Ene helidaru aste bidi