ವಿಜಯಪಥ ಸಮಗ್ರ ಸುದ್ದಿ
ಮಂಡ್ಯ: ಈ ಹಿಂದೆ ಇದ್ದ ಜಿಲ್ಲೆಯಲ್ಲಿ ಆಲೆಮನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ತಕ್ಷಣ ಜಿಲ್ಲಾಧಿಕಾರಿ ಸಮಿತಿ ರಚನೆ ಮಾಡಿ ವರದಿಯನ್ನು ಕೊಡಬೇಕು. ಈ ಸಮತಿ ನೀಡುವ ವರದಿಯನ್ವಯ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಜಿಲ್ಲೆಯಲ್ಲಿ ತಯಾರು ಮಾಡಲಾಗುವ ಪ್ರಸಿದ್ಧ ಬೆಲ್ಲವನ್ನು ಉತ್ಪಾದಿಸುವ ಆಲೆಮನೆಗಳ ಪುನಶ್ಚೇತನ ಕುರಿತ ಸಭೆಯಲ್ಲಿ ಮಾತನಾಡಿದ ಸಚಿವರು, ಆತ್ಮನಿರ್ಭರ ಭಾರತ ಯೊಜನೆಯಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜತೆ ನಾನು ಕೋ ಆರ್ಡಿನೇಟ್ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ. ಆದರೆ, ಈಗ ಮಂಡ್ಯದಲ್ಲಿ ಸಮಿತಿ ರಚನೆ ಮಾಡಿ ಎಲ್ಲ ದೃಷ್ಟಿಕೋನದಲ್ಲಿ ಸಂಪೂರ್ಣ ವರದಿ ತಯಾರಿಸಿ ನಮಗೆ ಮಾಹಿತಿ ಕೊಡಬೇಕು ಎಂದರು.
ಆತ್ಮನಿರ್ಭರದಡಿ ಆಲೆಮನೆಯನ್ನು ಕೇಂದ್ರ ಸರ್ಕಾರ ಘೋಷಿಸಿದ ಹಿನ್ನೆಲೆಯಲ್ಲಿ ಪ್ರತಿ ಆಲೆಮನೆಗೆ 5ರಿಂದ 10 ಲಕ್ಷ ರೂಪಾಯಿಯಂತೆ ಸುಮಾರು 25ರಿಂದ 30 ಕೋಟಿ ರೂಪಾಯಿ ಸಾಲ ಕೊಡುವ ಬಗ್ಗೆ ಪ್ರಾಥಮಿಕ ಸಭೆಗಳನ್ನು ನಡೆಸಿದ್ದೆ. ಆದರೆ, ಇಂದಿನ ಸಭೆಯಲ್ಲಿ ರೈತರಿಂದ ಅನೇಕ ಸಮಸ್ಯೆಗಳು ಕೇಳಿಬಂದಿದ್ದರಿಂದ ಇದಕ್ಕೊಂದು ಸಮಿತಿ ರಚನೆ ಮಾಡುವ ತೀರ್ಮಾನಕ್ಕೆ ಬಂದಿದ್ದು, ರೈತರಿಗೆ ಶಾಶ್ವತ ಪರಿಹಾರ ಸಿಕ್ಕಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ವರದಿ ಬಂದ ಬಳಿಕ ಆಲೆಮನೆ ಪುನಶ್ಚೇತನಕ್ಕೆ ಸಂಬಂಧಪಟ್ಟ ಐದಾರು ಮಂತ್ರಿಗಳನ್ನು ಮಂಡ್ಯಕ್ಕೆ ಕರೆಸಿ ಸಭೆ ನಡೆಸಿ ಬಗೆಹರಿಸಲಾಗುವುದು. ಜತೆಗೆ ಶೀಘ್ರದಲ್ಲಿ ವರದಿ ನೀಡಿದರೆ ಬಜೆಟ್ ನಲ್ಲಿ ಇದನ್ನು ಸೇರಿಸಿ ಘೋಷಿಸುವ ಕೆಲಸವನ್ನೂ ಮಾಡಲಾಗುವುದು ಎಂದರು.
ಬೆಲ್ಲ ತಯಾರಕರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. 500 ಕ್ಕಿಂತ ಹೆಚ್ಚು ಬೆಲ್ಲ ತಯಾರಿಕಾ ಘಟಕ ಇದೆ. ವಿದೇಶಕ್ಕೆ ಬೆಲ್ಲ ರಫ್ತಾಗುವ ಕೆಲಸ ಆಗಬೇಕು. ಕೆಮಿಕಲ್ ಅಥವಾ ಆರೋಗ್ಯಕ್ಕೆ ಹಾನಿಯಾಗುವಂತಹ ಬೆಲ್ಲ ತಯಾರಿಕೆ ಆಗದಂತೆ ನೋಡಿಕೊಳ್ಳಬೇಕು. ಕಡಿಮೆ ಸಂಬಳಕ್ಕೆ ಮಂಡ್ಯ ಜಿಲ್ಲೆಯ ಕಾರ್ಮಿಕರು ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಥವರಿಗೆ ಮನವರಿಕೆ ಮಾಡಬೇಕು. ಅವರನ್ನೆಲ್ಲ ಜಿಲ್ಲೆಗೆ ಮರಳಿ ಬರುವಂತೆ ಮಾಡಬೇಕು ಎಂದು ಸಚಿವ ನಾರಾಯಣ ಗೌಡ ಮನವರಿಕೆ ಮಾಡಿದರು.
ಮಂಡ್ಯದ ಸಾವಯವ ಬೆಲ್ಲ ಇನ್ನೂ ಬ್ರಾಂಡ್ ಆಗಿಲ್ಲ. ಇದಕ್ಕೆ ಪ್ರಮೋಟಿಂಗ್ ಹಾಗೂ ಮಾರ್ಕೆಟಿಂಗ್ ಮಾಡುವ ಅವಶ್ಯಕತೆ ಇದ್ದು, ಹೆಚ್ಚಿನ ಬೆಲೆ ಸಿಗಬೇಕೆಂದರೆ ವಿದೇಶಗಳಿಗೆ ರಫ್ತು ಮಾಡಬೇಕು. ಇದಕ್ಕೆ ಉತ್ಕೃಷ್ಟ ಗುಣಮಟ್ಟ ಬೇಕಾಗುತ್ತದೆ. ಇದರಿಂದ ಈಗ ರಚನೆಯಾಗುವ ಸಮಿತಿಯು ಇವುಗಳ ಬಗ್ಗೆಯೂ ಗಮನಹರಿಸಿ ವರದಿ ಸಿದ್ಧಪಡಿಸಬೇಕು ಎಂದು ಸಂಸದೆ ಸುಮಲತಾ ಅಂಬರೀಷ್ ಸಲಹೆ ನೀಡಿದರು.
ಶಾಸಕ ಎಂ.ಶ್ರೀನಿವಾಸ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ. ಅಪ್ಪಾಜಿನಗೌಡ, ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್, ಜಿಲ್ಲಾಧಿಕಾರಿ ಡಾ. ವೆಂಕಟೇಶ್, ಬೆಲ್ಲ ತಯಾರಿಕರು, ಕಬ್ಬು ಬೆಳೆಗಾರರು, ಕೃಷಿ ವಿಜ್ಞಾನಿಗಳು ಮತ್ತಿತರರು ಇದ್ದರು.