ಬೆಂಗಳೂರು: ಕೃಷಿ ಮಸೂದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ ಘೋಷಿಸಿದ್ದು, ಈ ಹಿನ್ನೆಲೆ ಸೋಮವಾರ ನಡೆಯಬೇಕಿದ್ದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ಹಾಗೂ ಡಿಪ್ಲೊಮಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸೆಪ್ಟೆಂಬರ್ 28ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಸೋಮವಾರ ನಡೆಯಬೇಕಿದ್ದ ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಅಥವಾ ಹಿಂದೂಸ್ಥಾನಿ ಸಂಗೀತ ಪರೀಕ್ಷೆಗಳನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಲಾಗಿದೆ.
ಕರ್ನಾಟಕ ಮುಕ್ತ ಶಾಲೆ- ಕೆಓಎಸ್ ಪರೀಕ್ಷೆ ಮತ್ತು ಕೆಓಎಸ್ ವಿಜ್ಞಾನ ಪರೀಕ್ಷೆಗಳನ್ನು ಸಹ ಮುಂದೂಡಿ ಎಸ್‍ಎಸ್‍ಎಲ್‍ಸಿ ಬೋರ್ಡ್ ಆದೇಶ ಹೊರಡಿಸಿದೆ. ಸೋಮವಾರ ಹೊರತುಪಡಿಸಿದರೆ ವೇಳಾಪಟ್ಟಿಯಲ್ಲಿ ಇನ್ನಾವುದೇ ಬದಲಾವಣೆ ಇಲ್ಲ ಎಂದು ಮಂಡಳಿ ತಿಳಿಸಿದೆ.
ಸೋಮವಾರ ನಡೆಯಬೇಕಿದ್ದ ಡಿಪ್ಲೋಮಾ ಪರೀಕ್ಷೆಗಳನ್ನು ಸಹ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ಸೋಮವಾರ ಹೊರತುಪಡಿಸಿದರೆ, ವೇಳಾಪಟ್ಟಿಯಲ್ಲಿ ಬೇರೆ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದೆ.
ಸೋಮವಾರ ಕರ್ನಾಟಕ ಬಂದ್ ಹಮ್ಮಿಕೊಳ್ಳಲಾಗಿದ್ದು, ರಾಜ್ಯವ್ಯಾಪಿ ಹೋರಾಟ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. ಹೋರಾಟ ತೀವ್ರ ಸ್ವರೂಪ ಪಡೆಯಬಹುದು ಎಂಬ ಉದ್ದೇಶದಿಂದ ಪರೀಕ್ಷೆಗಳನ್ನು ಮುಂದೂಡಲಾಗಿದೆ.