ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿನ ಅಬ್ಬರದ ನಡುವೆಯೇ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು ಈಗ ಹೆಚ್ಚಾಗಿ ಕೇಳಿ ಬರುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರವಧಿ ಇನ್ನೂ ಎರಡು ವರ್ಷ ಇದ್ರುದರೂ ಈಗಲೇ ಮೊಪಟಕುಗೊಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಸರ್ಕಾರ ಮತ್ತು ಪಕ್ಷದ ನಾಯಕರ ನಡುವಿನ ಅಂತರ, ಸಂಪುಟ ಸಚಿವರ ಒಳಜಗಳ ಹಾಗೂ ಸಿಎಂ ಪಟ್ಟಕ್ಕಾಗಿ ದೆಹಲಿಯಲ್ಲಿ ವಿವಿಧ ನಾಯಕರು ಲಾಬಿ ನಡೆಸುತ್ತಿರುವುದು ಈಗಾಗಲೇ ಗುಟ್ಟಾಗೇನು ಊಲಿದಿಲ್ಲ. ಹೀಗಾಗಿ ಹೈಕಮಾಂಡ್ ಒಪ್ಪಿದರೇ ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ ಎನ್ನುತ್ತಿವೆ ಬಲ್ಲ ಮೂಲಗಳು. ಇದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತೆ ಶಾಸಕ ಅರವಿಂದ ಬೆಲ್ಲದ್ ಅವರು ಈಗ ದೇಹಲಿಯಲ್ಲಿ ಮೊಕ್ಕಾಂ ಹೂಡಿದ್ದು ಇನ್ನಷ್ಟ ಕುತೂಹಲವನ್ನು ಇಮ್ಮಡಿಗೊಳಿಸುತ್ತಿದೆ.
ಸಿಎಂ ಹುದ್ದೆ ಆಕಾಂಕ್ಷಿಗಳು ಮತ್ತವರ ತಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರು ನಾಯಕತ್ವ ಬದಲಾವಣೆ ಸಂಬಂಧ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ಆದರೆ, ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂದು ಪಕ್ಷದ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಲೇ ಇದ್ದಾರೆ. ಈ ನಡುವೆಯೂ ಒಳಗೊಳಗೆ ಬದಲಾವಣೆಯ ಮಾತು ತೇಲಿ ಬರುತ್ತಲೇ ಇದೆ.
ರಾಜ್ಯ ಬಿಜೆಪಿಯ ಹಲವು ಶಾಸಕರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ. ಆದರೇ ಇದೆಲ್ಲವನ್ನು ತುಂಬ ಹತ್ತಿರದಿಂದಲೇ ಗಮನಿಸುತ್ತಿರುವ ಬಿಎಸ್‌ವೈ ಅವರು ತುಂಬ ಬೇಜಾರಾಗಿದ್ದು, ಈಗಾಗಲೇ ನನ್ನ ಕೈ ಕಟ್ಟಿಹಾಕಿ ಇವರ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಆದರೆ, ಇದನ್ನು ಇನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ ಎಂದು ತಮ್ಮ ಅತ್ಯಾಪ್ತರ ಬಳಿ ಹೇಳಿಕೊಂಡಿದ್ದು ಪದವಿ ತ್ಯಾಗ ಮಾಡುವ ಮಾತುಗಳನ್ನು ಆಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಈ ನಡುವೆ ಸರ್ಕಾರ ಕೋವಿಡ್ 19 ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಅತ್ತ ಕರ್ನಾಟಕ ಬಿಜೆಪಿ ತನ್ನದೇ ಪಕ್ಷದ ನಾಯಕರ ವಿರುದ್ಧ ಸಮರ ಸಾರಿದೆ. ಇನ್ನು ಕೋವಿಡ್ ರೋಗ ನಿಯಂತ್ರಿಸುವ ಉಸ್ತುವಾರಿ ಸಚಿವರ ನಡುವೆ ದ್ವೇಷ ಮತ್ತು ಶೀತಲ ಸಮರಗಳು ಆರಂಭವಾಗಿದ್ದು, ಅವು ಅತಿರೇಖಕ್ಕೆ ಹೋಗುತ್ತಿವೆ. ಇದೆಲ್ಲದರ ನಡುವೆಯೂ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಉತ್ತಮ ಎಂದು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡಲಾಗುತ್ತಿರುವ ಜತೆಗೆ ಒತ್ತಡವನ್ನು ಕೆಲ ನಾಯಕರು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈಗಾಗಲೇ ಯಡಿಯೂರಪ್ಪ ವಿರುದ್ಧ ಒಳಜಗಳ, ದೂರು ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದರೂ ಕೊರೊನಾ ಸಾಂಕ್ರಾಮಿಕ ಒಂದು ತಹಬದಿಗೆ ಬರುವವರೆಗೂ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಕೇಂದ್ರ ನಾಯಕರು ಹೇಳುತ್ತಲೇ ಇದ್ದಾರೆ ಎಂಬ ಮಾತು ಸಹಾ ಕೇಳಿ ಬರುತ್ತಿದೆ.
ಈ ನಡುವೆ ಬ್ರಾಹ್ಮಣ ಸಮುದಾಯದ ನಾಯಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಉತ್ತರ ಕರ್ನಾಟಕದ ಪ್ರಮುಖ ನಾಯಕ ಅರವಿಂದ್ ಬೆಲ್ಲದ್, ಗಾಣಿಗ ಸಮುದಾಯದ ಶಿವಕುಮರ್ ಉದಾಸಿ, ಸಾದರ ಲಿಂಗಾಯತ ಸಮುದಾಯ ನಾಯಕ, ಹಾಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ದಲಿತ ಎಡಗೈ ಸಮುದಾಯದ ನಾಯಕ, ಹಾಲಿ ಡಿಸಿಎಂ ಗೋವಿಂದ ಕಾರಜೋಳ, ಒಕ್ಕಲಿಗ ಸಮುದಾಯದ ನಾಯಕ, ಹಾಲಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಮತ್ತು ಅಚ್ಚರಿಯ ಹೆಸರೊಂದು ಕೇಳಿಬರುತ್ತಿದ್ದು ಅದು ಮುರುಗೇಶ್ ನಿರಾಣಿಯವರದ್ದಾಗಿದೆ. ಈ ಏಳು ಮಂದಿಯ ಹೆಸರುಗಳು ಸಿಎಂ ಗಾದಿಗಾಗಿ ಕೇಳಿಬರುತ್ತಿದ್ದು, ಇವರಲ್ಲಿ ಯಾರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಬೇಕು ಎಂಬ ಬಗ್ಗೆ ಪಕ್ಷದ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ಏಳು ಮಂದಿಯ ಹೆಸರು ಈಗಾಗಲೇ ಹೈ ಕಮಾಂಡ್ ಅಂಗಳದಲ್ಲಿದ್ದು ಬಿಎಸ್‌ವೈ ಅವರಿಗೆ ಪರ್ಯಾಯ ನಾಯಕರಾಗಿ ಯಾರು ನಿಲ್ಲಲ್ಲಿದ್ದಾರೆ ಎಂಬುವುದನ್ನಷ್ಟೇ ಹೈ ಕಮಾಂಡ್ ನಿರ್ಧರಿಸಬೇಕಿದೆ.
ಒಟ್ಟಾರೆ 75 ವರ್ಷ ವಯಸ್ಸು ಮೀರಿಸುವ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸದ್ಯದ ಮಟ್ಟಿಗೆ ಬಹುತೇಕ ಖಚಿತವಾದಂತೆ ಕಾಣುತ್ತಿದೆ. ಆದರೆ ಮುಂದಿನ ಬೆಳವಣಿಗೆ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡುವುದು ರಾಜ್ಯದ ಜನರದ್ದಾಗಿದೆ.