ವಿಜಯಪಥ ಸಮಗ್ರ ಸುದ್ದಿ
ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ವಿರುದ್ಧ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಇಂದು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸರ್ವರೀತಿಯಲ್ಲೂ ಸಜ್ಜಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಚಲೋ ಆಯೋಜಿಸಿದೆ. ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ವಿಧಾನಸಭೆಯಿಂದ ಸಂಗಮೇಶ್ವರ್ ಅವರನ್ನು ಅಮಾನತುಗೊಳಿಸಲಾಗಿದೆ ಅದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಆನಂತರ ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. 25 ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರತಿಭಟನೆ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ತಿಂಗಳ 28ರಂದು ಭದ್ರಾವತಿ ಕನಕ ಮಂಟಪದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿ ವೇಳೆ ಜೈಶ್ರೀರಾಮ್ ಎಂಬ ಘೋಷಣೆ ಕೂಗಿದ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.
ಘಟನೆಯಲ್ಲಿ ಶಾಸಕ ಸಂಗಮೇಶ್ವರರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಜಾತಿ ನಿಂದನೆ ಮತ್ತು ಹಲ್ಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಒಬ್ಬ ಮಗ ಇನ್ನು ಬಂಧನದಲ್ಲಿದ್ದಾರೆ. ಆದರೆ ಸಂಗಮೇಶ್ವರ್ ಅವರಿಗೆ ಜಾತಿ ನಿಂದನೆ ಪ್ರಕರಣಕ್ಕೆ ಮಾತ್ರ ನಿರೀಕ್ಷಣಾ ಜಾಮೀನು ನೀಡಲಾಗಿದೆ.
ಇನ್ನು ರಾಜ್ಯ ಬಿಜೆಪಿ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿ ದೌರ್ಜನ್ಯ ನಡೆಸುತ್ತಿದೆ ಎಂದು ಖಂಡಿಸಿ ಇಂದು ಶಿವಮೊಗ್ಗ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬಿಜೆಪಿ ಸರ್ಕಾರದ ಈ ನಡೆಯ ವಿರುದ್ಧ ಪ್ರತಿಭಟನೆಗೆ ನಾವು ನಿರ್ಧರಿಸಿದ್ದೇವೆ. ಈ ಬಗ್ಗೆ ಸದನದಲ್ಲಿ ಹಾಗೂ ಇತರ ಕಡೆಗಳಲ್ಲಿ ಚರ್ಚೆ ಮಾಡಿದ್ದೇವೆ. ಪಕ್ಷದ ಶಾಸಕ ಸಂಗಮೇಶ್ವರ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಅವರನ್ನು ಬಿಜೆಪಿಗೆ ಸೆಳೆಯಲು ಒತ್ತಡ ಹೇರಿದ್ದರು. ಆಪರೇಷನ್ ಕಮಲಕ್ಕೆ ಬಲಿಯಾಗಲಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿಆರೋಪಿಸಿದ್ದರು.