ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ತೀವ್ರ ಕಂಬನಿ ಮಿಡಿದಿದ್ದಾರೆ.
ಗಾಂಧಿವಾದಿ, ಪ್ರಾತಃಸ್ಮರಣೀಯರು ಹಾಗೂ ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ದೊರೆಸ್ವಾಮಿ ಅವರ ನಿಧನದಿಂದ ಶತಮಾನದ ಮಹಾನ್ ಹೋರಾಟಗಾರರನ್ನು ಕಳೆದುಕೊಳ್ಳುವ ಮೂಲಕ ನಾಡು ಹಾಗೂ ದೇಶ ಬಡವಾಗಿದೆ ಎಂದು ತಿಳಿಸಿದ್ದಾರೆ.
ಶತಾಯುಷಿಯಾಗಿದ್ದರೂ ದಣಿವರಿಯದ ಅವರ ಹೋರಾಟದ ಕಿಚ್ಚು ಮತ್ತು ಸಾಮಾಜಿಕ ಬದ್ಧತೆ ಅನನ್ಯ. ಹತ್ತಾರು ಬಾರಿ ಅವರನ್ನು ಭೇಟಿ ಮಾಡಿ ಚರ್ಚಿಸಿ, ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆದಿದ್ದೇನೆ. ಅದು ನನ್ನ ಭಾಗ್ಯ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ದೊರೆಸ್ವಾಮಿ (103) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು ನನ್ನ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ ಎಂದರು.
ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯೋತ್ತರ ನಂತರ ಸೆರೆವಾಸ ಅನುಭವಿಸಿದ್ದ ದೊರೆಸ್ವಾಮಿಯವರ ಬದುಕಿನ ಆದರ್ಶ, ಮೌಲ್ಯಗಳು ಎಲ್ಲರಿಗೂ ಸ್ಫೂರ್ತಿ.ಇಂತಹ ಮಹಾನ್ ಚೇತನ ಎರಡು ಶತಮಾನಗಳ ಕಾಲಘಟ್ಟದಲ್ಲಿ ನಮ್ಮೆಲ್ಲರಿಗೂ ಹೋರಾಟದ ಸ್ಫೂರ್ತಿಯ ಸೆಲೆಯಾಗಿ ಮುಂಚೂಣಿಯ ಮಾರ್ಗದರ್ಶಕರಾಗಿದ್ದರು ಎಂಬುದನ್ನು ಅತ್ಯಂತ ವಿನೀತ ಭಾವದಿಂದ ಸ್ಮರಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಮೃತರ ಕುಟುಂಬದ ಸದಸ್ಯರು, ಅವರ ಅಸಂಖ್ಯ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.