ವಿಜಯಪಥ ಸಮಗ್ರ ಸುದ್ದಿ
ಬೈಂದೂರು: ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯಿಲ್ಲ ನಾವೆಲ್ಲ ಒಂದಾಗಿ ಕೆಲಸ ಮಾಡುತ್ತೇವೆ. ಯಡಿಯೂರಪ್ಪ ಅವರು ಅತ್ಯಂತ ಸಮರ್ಥವಾಗಿ ಇಡೀ ಕರ್ನಾಟಕ ರಾಜ್ಯ ಮೆಚ್ಚುವಂತೆ, ಎಲ್ಲಾ ರಾಜಕಾರಣಿಗಳು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಒಟ್ಟಾಗಿ ಒಂದಾಗಿ ನಾವಿರುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬೈಂದೂರಿನಲ್ಲಿ ಗ್ರಾಪಂನಲ್ಲಿ ಆಯೋಜಿಸಿದ್ದ ಕೋವಿಡ್ ನಿರ್ವಹಣಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲಿದ್ದಾರೆ ಎಂಬ ಗೊಂದಲಕ್ಕೆ ಉತ್ತರ ನೀಡಿದರು.
ಸಿಎಂ ನೀಡುವ ಕಾರ್ಯ ಸೂಚಿ, ಅವರ ಚಟುವಟಿಕೆ, ಮಾರ್ಗಸೂಚಿ, ಆದೇಶವನ್ನು ಯಥಾವತ್ತಾಗಿ ಅನುಷ್ಠಾನ ಮಾಡುವ ಮೂಲಕ ಕೊರೊನಾ ಮುಕ್ತ ಕರ್ನಾಟಕ ಮಾಡಲು ಯಡಿಯೂರಪ್ಪರವರ ನೇತೃತ್ವದಲ್ಲಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಲು ತೀರ್ಮಾನಿಸಿದ್ದೇವೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂದರು.
ಡಯಾಲಿಸೀಸ್ ಸೆಂಟರ್ ಗೆ ಸ್ಥಳಾವಕಾಶದ ಕೊರತೆ
ಕೊಲ್ಲೂರು ದೇವಸ್ಥಾನದಿಂದ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಡಯಾಲಿಸಿಸ್ ಸೆಂಟರ್ ಮಾಡುವ ಉದ್ದೇಶವಿತ್ತು. ಆದರೆ ನಾನು ಸ್ಥಳ ಪರಿಶೀಲನೆ ಹೋಗಿದ್ದು, ಅಲ್ಲಿ ಡಯಾಲಿಸೀಸ್ ಸೆಂಟರ್ ತೆರೆಯಲು ಸ್ಥಳದ ಅವಕಾಶದ ಕೊರತೆ ಇದೆ. ಅದಕ್ಕೆ ಬೇಕಾದ ಪೂರಕವಾದ ವ್ಯವಸ್ಥೆ ಮಾಡಲು ಸ್ಥಳವಿಲ್ಲ. ಈ ಬಗ್ಗೆ ಡಿಎಚ್ ಓ ಬಳಿ ಮಾತನಾಡಿದ್ದೇನೆ. ತಾಲೂಕು ಆಸ್ಪತ್ರೆಯಾಗಿ ಪರಿವರ್ತನೆ ಮಾಡಲು ಹೊಸ ಕಟ್ಟಡವಾಗುತ್ತದೆ. ಆದರೆ, ಕಟ್ಟಡ ನಿರ್ಮಾಣ ತಡವಾಗಲಿದೆ. ಬದಲಿ ವ್ಯವಸ್ಥೆ ತಕ್ಷಣ ದೇವಸ್ಥಾನದಿಂದಲೇ ಮಾಡುತ್ತೇವೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರ ವೇತನ ಪರಿಷ್ಕರಣೆ
ಆಶಾ ಕಾರ್ಯಕರ್ತೆಯರು ಕೊರೊನಾ ವ್ಯಾಪ್ತಿಯಲ್ಲಿ ಬರಲಿದ್ದಾರೆ. ಹೀಗಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ಸಿಗಲಿದೆ. ವೇತನ ಪರಿಷ್ಕರಣೆ ಗೌರವ ಧನ ಬಗ್ಗೆ ಚರ್ಚಿಸಲಾಗುವುದು ಎಂದರು.
ಪ್ರತೀ ಗ್ರಾಮ ಪಂಚಾಯಿತಿಗೂ ಅಗವಿದ್ದರೆ ಒಂದು ವಾಹನವನ್ನು ತಿಂಗಳ ಮಟ್ಟಿಗೆ ಪಡೆದು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವುದಕ್ಕೆ ಬಳಸಿಕೊಳ್ಳಲು ತಿಳಿಸಲಾಗಿದೆ. ಇನ್ನು ಮಂಗಳೂರಿನಲ್ಲಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಆದೇಶ ಹೊರಡಿಸಲು ಹೇಳಲಾಗುವುದು ಎಂದರು.
ಬ್ಲ್ಯಾಕ್ ಫಂಗಸ್ ಗೆ ಉಚಿತ ಚಿಕಿತ್ಸೆ
ಪ್ರತೀ ಜಿಲ್ಲೆಗೊಂದರಂತೆ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಕೊಡಬೇಕು ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ಉಚಿತ ಚಿಕಿತ್ಸೆ ಕೊಡಬೇಕು ಎಂದು ಆದೇಶ ಹೊರಡಿಸಿದೆ.
ಪರಿಹಾರ ನೀಡುವ ಭರವಸೆ
ಪ್ರಕೃತಿ ವಿಕೋಪದ ಸಂದರ್ಭ ಮನೆಗೆ ನೀರು ನುಗ್ಗಿದರೆ ಐದು ಸಾವಿರ ನೀಡಲಾಗಿದೆ. ಯಾರಿಗಾದರು ಸಿಕ್ಕಿಲ್ಲವಾದರೆ ಆ ಬಗ್ಗೆ ಪರಿಶೀಲಿಸಲಾಗುವುದು. ಮನೆ ಬಿದ್ದರೂ ಇಂತಿಷ್ಟು ಪರಿಹಾರ ಘೋಷಿಸಲಾಗಿದೆ. ಪೂರ್ತಿ ಮನೆ ಬಿದ್ದರೆ, 5 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಲು ಹೇಳಲಾಗಿದೆ. ತಕ್ಷಣ ವರದಿ ಕೊಟ್ಟರೆ ಒಂದು ಲಕ್ಷ ರೂ. ನೀಡಿ, ನಂತರ ಹಂತ ಹಂತವಾಗಿ ನಾಲ್ಕು ಲಕ್ಷ ರೂ. ನೀಡಲಾಗುವುದು ಎಂದರು.