ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕನ್ನಡ ಚಿತ್ರರಂಗ, ರಂಗಭೂಮಿಯ ಹಿರಿಯ ನಟ ಬಿ.ಎಂ. ಕೃಷ್ಣೇಗೌಡ (80) ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಕೃಷ್ಣೇಗೌಡರಿಗೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದರು. ಆದರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೃಷ್ಣೇಗೌಡರ ಮಗ ಸತೀಶ್ ಒಂದು ತಿಂಗಳ ಹಿಂದೆ ಕೊರೊನಾಗೆ ಬಲಿಯಾಗಿದ್ದರು. ಈ ವೇಳೆ ಕೃಷ್ಣೇಗೌಡರು ಆಸ್ಪತ್ರೆಯಲ್ಲಿ ಇದ್ದ ಕಾರಣ ಅವರಿಗೆ ಮಗನ ಸಾವಿನ ವಿಷಯ ಹೇಳಿರಲಿಲ್ಲ. ಆದರೆ ಕಳೆದ ಮೂರು ದಿನಗಳ ಹಿಂದೆ ಮತ್ತೆ ಅವರ ಅರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇಂದು ಅಸುನೀಗಿದ್ದಾರೆ.
“ಮುಖ್ಯಮಂತ್ರಿ” ನಾಟಕದಲ್ಲಿ ಪಕ್ಷದ ಅಧ್ಯಕ್ಷನ ಪಾತ್ರದಿಂದ ಹೆಚ್ಚು ಜನಪ್ರಿಯವಾಗಿದ್ದ ಕೃಷ್ಣೇಗೌಡ ಅವರು ಹಾಲಿಂಡ ತವರು, ಚಕ್ರವ್ಯೂಹ, ಸಂಸಾರ ನೌಕೆ, ಒಲವಿನ ಉಡುಗೊರೆ ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ಅವರ ಕಲಾಸೇವೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಹ ಲಭಿಸಿತ್ತು. ಇನ್ನು ಕೃಷ್ಣೇಗೌಡ ಕೇವಲ ಚಲನಚಿತ್ರ, ರಂಗಭೂಮಿಯ ನಟನೆಗೆ ಮಾತ್ರವಲ್ಲದೆ ರಾಜ್ಯ ಮಟ್ಟದ ವಾಲಿಬಾಲ್ ಆಟಗಾರರಾಗಿ ಸಹ ಹೆಸರಾಗಿದ್ದರು.
ಹಿರಿಯ ಕಲಾವಿದರ ನಿಧನಕ್ಕೆ ಚಿತ್ರೋದ್ಯಮದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೊರೊನಾ ಕಾರಣದಿಂದ ಇತ್ತೀಚೆಗೆ ಕನ್ನಡ ಸಿನಿಮಾ ರಂಗದ ಅನೇಕರು ನಿಧನರಾಗಿದ್ದಾರೆ. ಶಂಖನಾದ ಅರವಿಂದ್, ರೇಣುಕಾ ಶರ್ಮಾ, ನಿರ್ಮಾಪಕ ರಾಮು, ರಂಗಭೂಮಿ ಕಲಾವಿದ ರಾಜಾರಾಂ, ಕನ್ನಡ ಸಿನಿಮಾದ ನಿರ್ಮಾಪಕ ಹಾಗೂ ವಿತರಕ ದೀಪಕ್ ಸಾಮಿದೊರೈ ಸೇರಿ ಅನೇಕರು ಇದಾಗಲೇ ಇಹಲೋಕ ತ್ಯಜಿಸಿದ್ದಾರೆ ಎನ್ನುವುದು ಖೇದದ ಸಂಗತಿ.