ದಾವಣಗೆರೆ: ಟೆಕ್ಕಿ ಸಾವಿಗೆ ಸುಮಾರು 3 ಕೋಟಿ ರೂಪಾಯಿ ಅಪಘಾತ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಬಸ್ ಜಪ್ತಿಗೆ ಕೋರ್ಟ್ ಆದೇಶಿಸಿದ್ದು, ಅದರಂತೆ ಕೋರ್ಟ್ ಸಿಬ್ಬಂದಿ ಸಾರಿಗೆ ಇಲಾಖೆಯ ಅಪಘಾತಕ್ಕೀಡಾಗಿದ್ದ ಬಸ್ ಅನ್ನು ಜಫ್ತಿ ಮಾಡಿದ್ದಾರೆ.
ಹಾವೇರಿ ಡಿಪೋಗೆ ಸೇರಿ ಬಸ್ ಅನ್ನು ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
2013 ನವೆಂಬರ್ 6 ರಂದು ಸಾರಿಗೆ ಇಲಾಖೆ ಬಸ್ ಡಿಕ್ಕಿ ಹೊಡೆದು ಸಾಫ್ಟ್ವೇರ್ ಇಂಜಿನಿಯರ್ ಸಂಜೀವ್ ಪಾಟೀಲ್ ಎಂಬುವರು ಮೃತಪಟ್ಟಿದ್ದರು. ಮೃತರ ಪತ್ನಿಗೆ 2.82 ಕೋಟಿ ರೂಪಾಯಿ ಪರಿಹಾರ ನೀಡುವಂತೆ ದಾವಣಗೆರೆ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಅದೇಶ ಮಾಡಿತ್ತು.
ಸಕಾಲಕ್ಕೆ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯ ಬಸ್ ಜಪ್ತಿಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿನ ಹಾವೇರಿ ಡಿಪೋಗೆ ಸೇರಿದ ಬಸ್ ಇದೀಗ ಜಪ್ತಿಯಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದ ಕಳೆದ ಆರು ತಿಂಗಳ ಹಿಂದೆ ಆರು ಬಸ್ಗಳ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು. ಮೃತನ ಪತ್ನಿ ಗೌರಿ ಪಾಟೀಲ್‌ಗೆ ಸ್ವಲ್ಪ ಪ್ರಮಾಣ ಪರಿಹಾರ ನೀಡಿತ್ತು. ಉಳಿದ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ನ್ಯಾಯಾಲಯ ಮತ್ತೆ ಒಂದು ಬಸ್ ಜಪ್ತಿಗೆ ಆದೇಶ ನೀಡಿದೆ.
ಈಗಾಗಲೇ ಇಲಾಖೆಯ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇಲಾಖೆಯನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದಾರೆ. ಇಂಥ ಅಧಿಕಾರಿಗಳು ಇರುವವರೆಗೆ ಯಾರಿಗೂ ಪರಿಹಾರ ಸಿಗುವುದಿಲ್ಲ. ಹೀಗಾಗಿ ಇಲಾಖೆ ತನ್ನ ಸಂಪತ್ತನ್ನು ಕಳೆದುಕೊಳ್ಳುವ ಮೂಲಕ ಇನಷ್ಟು ನಷ್ಟಕ್ಕೆ ಸಿಲುಕುತ್ತಿದೆ.
ಸಾರಿಗೆ ಸಚಿವರು ಸದ್ಯ ಭ್ರಷ್ಟ ಅಧಿಕಾರಿಗಳ ಬೆವರಿಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇಲಾಖೆ ಲಾಭದತ್ತ ಸಾಗುವ ಎಲ್ಲ ಭರವಸೆಗಳನ್ನೂ ಸಚಿವರ ನಡೆ ಮೂಡಿಸುತ್ತಿದೆ.