ಮೈಸೂರು: ವಿಶ್ವ ವಿಖ್ಯಾತ ಜಂಬೂಸವಾರಿಗಾಗಿ ಅರಮನೆಯಲ್ಲಿ ಸಿದ್ಧತಾ ಕಾರ್ಯಗಳು ಭರದಿಂದ ನಡೆದಿವೆ. ವಿವಿಧ ಕಲಾತಂಡಗಳು ಅಲಂಕಾರಮೊದಲಾದ ಪ್ರ ಕ್ರಿಯೆಯಲ್ಲಿ ತೊಡಗಿವೆ. ಕೆಲವು ಸ್ತಬ್ಧ ಚಿತ್ರ ಗಳು ಈಗಾಗಲೇ ಅಣಿಗೊಂಡಿವೆ. ಅಂಬಾರಿಯ ಉತ್ಸವ ಮೂರ್ತಿಯ ಆಗಮನವಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮ ಮನೆಮಾಡಿದೆ. ವಿಜಯದಶಮಿ ದಿನವಾದ ಇಂದು (ಶುಕ್ರವಾರ) ಜಂಬೂಸವಾರಿ ನಡೆಯಲಿದೆ.
ಅಂಬಾರಿ ಹೊರಲಿರುವ ಆನೆ ಅಭಿಮನ್ಯುವಿನ ಎಡ ಹಾಗೂ ಬಲದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಆನೆಗಳು ಹೆಜ್ಜೆ ಹಾಕಲಿವೆ. ಒಂದು ತಾಸಿನಲ್ಲಿ ಮೆರವಣಿಗೆ ಸಂಪನ್ನಗೊಳ್ಳಲಿದೆ.
ವಾರದಿಂದ ನಡೆದು ಬಂದಿದ್ದ ಮೈಸೂರು ದಸರಾ ಮಹೋತ್ಸವಕ್ಕೆ ಜಂಬೂಸವಾರಿ ಮೂಲಕ ಇಂದು ತೆರೆ ಬೀಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸತತ ಎರಡನೇ ವರ್ಷವೂ ದಸರಾ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತ ಗೊಳಿಸಲಾಗಿದೆ.
ಈಗಾಗಲೇ ಜಂಬೂ ಸವಾರಿಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಮುಂಜಾನೆ 4.30 ರಿಂದಲೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ.
ಮಧ್ಯಾಹ್ನ 2 ಗಂಟೆ ನಂತರ ಅಂಬಾರಿ ಹೊರಲಿರುವ ಅಭಿಮನ್ಯು ಆನೆಗೆ ಗಾದಿ ಕಟ್ಟಿ ಅಂಬಾರಿ ಕಟ್ಟೊ ಕಾರ್ಯ ಆರಂಭವಾಗುತ್ತದೆ.
ಸಂಜೆ 4.30ರ ಸುಮಾರಿಗೆ ಲಲಿತ್ ಮಹಲ್ ಹೋಟೆಲ್‌ನಿಂದ ಸಿಎಂ ಹಾಗೂ ಸಂಪುಟ ಸದಸ್ಯರು ನೇರವಾಗಿ ಅರಮನೆ ಅಂಗಳಕ್ಕೆ ಬಸ್‌ನಲ್ಲಿ ಬರುತ್ತಾರೆ.
ಹಾಗೆಯೇ ಈ ಬಾರಿ ದಸರಾ ಉದ್ಘಾಟನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿದ್ದಾರೆ.
ಅರಮನೆಯಲ್ಲಿ ಮುಂಜಾನೆ 4.40ರಿಂದ ಹೋಮ ಆರಂಭವಾಗಿದ್ದು, ಹೋಮಕ್ಕೆ ಯದುವೀರ್‌ರಿಂದ ಪೂರ್ಣಾಹುತಿ ನೀಡಿದ್ದು, 5.45ಕ್ಕೆ ಆನೆ ಕುದುರೆ ಹಸುಗಳ ಆಗಮನವಾಗಿದೆ. 6.13 ರಿಂದ 6.32ರವರೆಗೆ ಪೂಜಾ ವಿಧಿ ವಿಧಾನಗಳು ಸಾಗಿದ್ದು, ನಂತರ ಖಾಸಾ ಆಯುಧಗಳಿಗೆ ಯದುವೀರ್ ರಿಂದ ಉತ್ತರ ಪೂಜೆ ಮಾಡಿದ್ದು, ಉತ್ತರ ಪೂಜೆ ನಂತರ ಶಮಿ ಪೂಜೆ ನೆರವೇರಿಸಲಿದ್ದಾರೆ.
ನಂತರ ಚಾಮುಂಡಿ ದೇವಿ ವಿಗ್ರಹ ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆಯಾಗಲಿದ್ದು, ಅದರ ನಂತರ ದೇವಾಲಯದಿಂದ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಲಾಗುತ್ತದೆ.
ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಈ ಬಾರಿ ಚಾಮುಂಡಿಬೆಟ್ಟದಿಂದ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ. ಇಂದು ಬೆಳಗ್ಗೆ 8 ಗಂಟೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದ್ಲಿದರು.
ಉತ್ಸವ ಮೂರ್ತಿ ತರುವ ಅಲಂಕೃತ ವಾಹನದೊಂದಿಗೆ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಅಶ್ವದಳ, ಭಜನಾ ತಂಡ, ವೇದಘೋಷ, ಚಂಡೆ, ನವದುರ್ಗೆಯರು ಸಾಗುವರು. ತಾವರಕಟ್ಟೆ, ಇಟ್ಟಿಗೆಗೂಡು, ಹಾರ್ಡಿಂಚ್ ವೃತ್ತದ ಮೂಲಕ ಅರಮನೆ ಪ್ರವೇಶಿಸಲಾಯಿತು.
ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಮೇಲೆ ವಿರಾಜಮಾನವಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾ ರ್ಚನೆಮಾಡಿದರು. ಅಲಂಕೃತ ವಾಹನದಲ್ಲಿ ನಾದಸ್ವರ ವಿವಿಧ ಕಲಾತಂಡಗಳ ಜೊತೆಗೆ ಬೆಟ್ಟದಲ್ಲಿ ಮೆರವಣಿಗೆ ನೆರವೇರಿಸಲಾಯಿತು.