ತುಮಕೂರು: ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ಮತ್ತು ಹಾಲಿ ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರವನ್ನು ಘೋಷಣೆ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಕ್ಷೇತ್ರವನ್ನು ಬದಲಾವಣೆ ಮಾಡಿ ಅವರು ಸೋಲು ಕಂಡಿದ್ದರು. ಹೀಗಾಗಿ ಮತ್ತೆ ಈಗಾಗಬಾರದು ಎಂದು ಈಗಲೇ ತಾವು ಸ್ಪರ್ಧೆ ಮಾಡುವ ಕ್ಷೇತ್ರ ಬಗ್ಗೆ ತುಮಕೂರಿನಲ್ಲಿ ಮಾತನಾಡುತ್ತಿದ್ದ ದೇವೇಗೌಡರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ತುಮಕೂರಿನಿಂದಲೇ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದ ಅವರು, “ಜೆಡಿಎಸ್ ಪಕ್ಷ ಎಂದರೆ ಕೇವಲ ದೇವೇಗೌಡ, ಕುಮಾರಸ್ವಾಮಿ ಅಲ್ಲ. ನಾನು, ನನ್ನ ಮಗ ಮಾತ್ರ ಪಕ್ಷವನ್ನು ಉಳಿಸಲು ಸಾಧ್ಯವಿಲ್ಲ. ರಾಜ್ಯದ 224 ಕ್ಷೇತ್ರದಲ್ಲಿರುವ ಪಕ್ಷದ ಕಾರ್ಯಕರ್ತರು, ಮುಖಂಡರಿಂದ ಸಾಧ್ಯ ಎಂದು ಹೇಳಿದರು.
ಇನ್ನು 2023ರ ಲೋಕಸಭೆ ಚುನಾವಣೆ ನಂತರ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೋ, ಇಲ್ಲವೋ ಗೊತ್ತಿಲ್ಲ. ಅದು ಅವರ ಹಣೆ ಬರಹ, ನಾನು ಮಾತ್ರ 2024ರಲ್ಲಿ ಮತ್ತೆ ತುಮಕೂರು ಲೋಕಸಭಾ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.
ನನಗೀಗ 89 ವರ್ಷ. ಹೋರಾಟದ ಶಕ್ತಿ ಕುಂದಿಲ್ಲ, ಇನ್ನೂ ಚೈತನ್ಯವಿದೆ. ಪಕ್ಷ ಉಳಿಸುವ ಛಲದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ ಎಂದರು.
2019ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು ತುಮಕೂರಿನಿಂದದ ಸ್ಪರ್ಧೆ ಮಾಡಿದ್ದರು. 5,82,788 ಮತಗಳನ್ನು ಪಡೆದು, ಬಿಜೆಪಿಯ ಜಿ. ಎಸ್. ಬಸವರಾಜ ವಿರುದ್ಧ ಸೋಲು ಕಂಡಿದ್ದರು. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದರು.
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿತ್ತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಗೆದ್ದಿದ್ದು ಒಂದೊಂದು ಸ್ಥಾನ ಮಾತ್ರ.
ಅದು ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರದಲ್ಲಿ ಡಿ. ಕೆ. ಸುರೇಶ್ ಕಾಂಗ್ರೆಸ್‌ನಿಂದ ಗೆದ್ದರು. 25 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದರೆ, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದರು.
ಅಂದು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಕಾರಣ ಚುನಾವಣೆಯಲ್ಲಿ ಕಾಂಗ್ರೆಸ್ ಸಹ ಅಭ್ಯರ್ಥಿ ಹಾಕದೇ ದೇವೇಗೌಡರಿಗೆ ಬೆಂಬಲ ನೀಡಿತ್ತು. ಆದರೂ ಸಹ ಚುನಾವಣೆಯಲ್ಲಿ ದೇವೇಗೌಡರು ಸೋಲು ಕಂಡಿದ್ದರು. ಬಳಿಕ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.